ಮಕ್ಕಳಲ್ಲಿ ತುಳುವಿನ ಮೇಲೆ ಪ್ರೀತಿ ಮೂಡಿಸಲು ಕಾರ್ಯಕ್ರಮ: ತಾರಾನಾಥ್ ಗಟ್ಟಿ ಕಾಪಿಕಾಡ್

ಉಳ್ಳಾಲ, ಆ.22: ತುಳು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ತುಳು ಭಾಷಾ ಹಾಡುಗಳನ್ನು ಕಲಿಸಲು ಅಕಾಡಮಿ ವತಿಯಿಂದ ಡೆನ್ನ ಡೆನ್ನಾನ-ಪದ ಪನ್ಕನ ಅಭಿಯಾನ ಆರಂಭಿಸಲಾಗಿದೆ ಎಂದು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ ಸಹಯೋಗದಲ್ಲಿ ಶುಕ್ರವಾರ ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿಯ ಡೆನ್ನ ಡೆನ್ನಾನ - ಪದ ಪನ್ಕನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತುಳು ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಲು ಕಲಿಸುವ ’ಡೆನ್ನ ಡೆನ್ನಾನ - ಪದ ಪನ್ಕನ’ ಕಾರ್ಯಗಾರವು ತುಳುವಿನ ಶ್ರೇಷ್ಠ ಕವಿಗಳ ಹಾಗೂ ಹಾಡುಗಳ ಪರಿಚಯ ಮಾಡಿಕೊಡಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತುಳು ಹಾಡುಗಳನ್ನು ಇತರ ವೇದಿಕೆಗಳಲ್ಲಿ ಪ್ರಸ್ತುತಪಡಿಸಲು ಇದು ಸಹಕಾರಿಯಾಗಲಿದೆ ಎಂದರು.
ಸಿನಿಮಾ ಮತ್ತು ನಾಟಕ ಕಲಾವಿದೆ ರೂಪಾಶ್ರೀ ವರ್ಕಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಗಾಯಕ, ಸಂಗೀತ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್, ಗಾಯಕಿ ವಾಣಿ ಸಪ್ರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಈ ವೇಳೆ ತುಳು ಅಕಾಡಮಿ ನಿರ್ಮಿಸಿದ, ದಿನೇಶ್ ಅತ್ತಾವರ ನಿರ್ದೇಶನದ ’ಜಾಗ್‌ರ್ತೆ..!?’ ತುಳು ನಾಟಕದ ಪ್ರದರ್ಶನ ನಡೆಯಿತು. ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಆನಂದಾಶ್ರಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ, ಕೊಲ್ಯ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಶೆಟ್ಟಿ, ಯಕ್ಷಗಾನ ಕಲಾವಿದ ಕುಸುಮಾಕರ ಕುಂಪಲ, ಶಾಲೆಯ ಮುಖ್ಯ ಶಿಕ್ಷಕ ಗುರುಮೂರ್ತಿ ಪಿ. ಉಪಸ್ಥಿತರಿದ್ದರು.
ಶಿಕ್ಷಕರಾದ ಪ್ರದೀಪ್ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ್ ಶೆಣೈ ವಂದಿಸಿದರು.ಗಣೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.







