ಉಪ್ಪಿನಂಗಡಿ ಪರಿಸರದಲ್ಲಿ ಕಾಡಾನೆಗಳು ಪತ್ತೆ

ಉಪ್ಪಿನಂಗಡಿ: ಕಳೆದೆರಡು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಪರಿಸರದಲ್ಲಿ ಕಾಣಿಸುತ್ತಿದ್ದ ಜೋಡಿ ಕಾಡಾನೆಗಳು ರವಿವಾರ ಮುಂಜಾನೆಯಿಂದ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ವಿಹರಿಸುತ್ತಿದ್ದು, ನದಿಯ ಉಭಯ ದಿಕ್ಕಿನಲ್ಲೂ ಜಮಾಯಿಸಿದ ಜನ ಸಮೂಹದಿಂದಾಗಿ ನದಿಯಲ್ಲೇ ಅಕ್ಷರಷಃ ದಿಗ್ಬಂಧನಕ್ಕೀಡಾದ ಘಟನೆ ನಡೆದಿದೆ.
ಶನಿವಾರ ರಾತ್ರಿ ಸುರ್ಯದ ಸುಬ್ರಹ್ಮಣ್ಯ ಭಟ್ ಎಂಬವರ ತೋಟದಲ್ಲಿ ಇದ್ದ ಕಾಡಾನೆಗಳು ರಾತ್ರಿ ವೇಳೆ ಸರಳೀಕಟ್ಟೆ, ಪಿಲಿಗೂಡು, ಅಂಬೊಟ್ಟು ಮಾರ್ಗವಾಗಿ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿಂದ ನೇತ್ರಾವತಿ ನದಿಗಿಳಿದಿದೆ. ಬೆಳಗ್ಗಿನ ಜಾವವೇ ಉಪ್ಪಿನಂಗಡಿ ಬಳಿಯ ಕೂಟೇಲುವಿನ ನೇತ್ರಾವತಿ ನದಿಯಲ್ಲಿ ಕಾಡಾನೆಗಳ ಇರುವಿಕೆ ಜನಗಳಿಗೆ ತಿಳಿದು ಆನೆಗಳನ್ನು ನೋಡಲು ನದಿಯತ್ತ ಜನ ತಂಡೋಪತಂಡವಾಗಿ ಆಗಮಿಸತೊಡಗಿ ದರು. ಇದರಿಂದ ಗಲಿಬಿಲಿಗೊಂಡ ಆನೆ ನದಿಯ ಎರಡೂ ಪಾಶ್ರ್ವಕ್ಕೂ ಸಾಗಿ ದಡದತ್ತ ಹೋಗಲು ಸಾಧ್ಯವಾಗದೆ ಬಳಿಕ ನದಿ ಮಧ್ಯದ ದಿನ್ನೆಯಲ್ಲಿ ನಿಂತುಕೊಂಡಿತ್ತು.
ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ರಸ್ತೆಯ ಬಳಿ ನೇತ್ರಾವತಿ ನದಿಯಲ್ಲಿ ಕಾಣಿಸಿದ್ದ ಕಾಡಾನೆಗಳು ಜನವಸತಿ ಪ್ರದೇಶದತ್ತ ಬಾರದಂತೆ ಅರಣ್ಯ ಇಲಾಖೆ , ಪೊಲೀಸ್ ಇಲಾಖೆ , ಹಾಗೂ ಹೋಂಗಾರ್ಡ್ ಸಿಬ್ಬಂದಿ ನಿಗಾವಿರಿಸಿ ಜಂಟಿ ಕಾರ್ಯಾಚರಣೆ ನಡೆಸಿದರು.
ಉಪ್ಪಿನಂಗಡಿಯಲ್ಲಿದ್ದ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಬೋಟನ್ನು ಬಳಸಿಕೊಂಡು ನದಿಗಿಳಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಕೋವಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಗಳು ಜನವಸತಿಯತ್ತ ಬಾರದಂತೆ ಬೆದರಿಸಲು ಯತ್ನಿಸಿದರು. ಜನವಸತಿ ಪ್ರದೇಶದತ್ತ ಆನೆಗಳ ಚಲನೆ ಕಂಡು ಬಂದಾಗಲೆಲ್ಲಾ ದಡದಲ್ಲಿ ಗರ್ನಲ್ ಸಿಡಿಸಿ ಆನೆಗಳನ್ನು ಬೆದರಿಸಲಾಯಿತು. ಒಟ್ಟಾರೆ ದಿನವಿಡೀ ನದಿಯಲ್ಲಿ ಬೋಟ್ ಮೂಲಕ ಗುಂಡು ಹಾರಿಸುತ್ತಾ, ದಡದಲ್ಲಿ ಸುಡುಮದ್ದು ಸಿಡಿಸುವ ಮೂಲಕ ಆನೆಗಳನ್ನು ಉಪ್ಪಿನಂಗಡಿ ಪೇಟೆಯತ್ತ ಸಂಚರಿಸದಂತೆ ನಿರಂತರ ಪ್ರಯತ್ನ ನಡೆಸಲಾಯಿತು. ಸಂಜೆಯವರೆಗೂ ಆನೆ ನದಿಯಲ್ಲೇ ಕೂಟೇಲು ಪರಿಸರದಿಂದ ಪಂಜಳ ತನಕ ಸಂಚರಿಸುವುದು ಹಿಂದಿರುಗುವುದು ಮಾಡುತ್ತಲೇ ಇದ್ದ ಕಾರಣ ಇಲಾಖಾಧಿಕಾರಿಗಳು ಆನೆ ಓಡಿಸುವ ಪ್ರಯತ್ನ ವನ್ನು ನಡೆಸುತ್ತಲ್ಲೇ ಇರಬೇಕಾಯಿತು. ಸಂಜೆಯ ವೇಳಗೆ ಆನೆಗಳು ಮತ್ತೆ ಪಂಜಳ ತಲುಪಿವೆ.
ಜಮಾಯಿಸಿದ ಭಾರೀ ಜನ: ಸಂಚಾರ ನಿಯಂತ್ರಣಕ್ಕೆ ಹೈರಾಣ
ರವಿವಾರದ ದಿನ ಉಪ್ಪಿನಂಗಡಿ ಪೇಟೆಯ ಬಳಿ ಎರಡು ಕಾಡಾನೆಗಳು ಇದೆ ಎಂಬ ಸುದ್ದಿ ಹರಡಿ ಭಾರೀ ಸಂಖ್ಯೆಯ ಜನ ಕೂಟೇಲು ಪರಿಸರಕ್ಕೆ ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿತ್ತು. ನದಿಯ ಒಂದು ಪಾಶ್ರ್ವ ಉಪ್ಪಿನಂಗಡಿ ಗ್ರಾಮವಾದರೆ, ಇನ್ನೊಂದು ಪಾಶ್ರ್ವ ಇಳಂತಿಲ ಗ್ರಾಮ ಬರುತ್ತದೆ. ಇತ್ತ ನದಿಯ ಉಭಯ ಕಡೆಗಳಲ್ಲಿಯೂ ಭಾರೀ ಜನ ಸಾಗರ ವನ್ನು ಕಂಡ ಕಾಡಾನೆಗಳೂ ಕೂಡಾ ಭಯಭೀತವಾಗಿ ಎತ್ತ ಸಂಚರಿಸಬೇಕೆಂದು ತಿಳಿಯದೆ ದಿನವಿಡೀ ನದಿಯಲ್ಲೇ ದಿಗ್ಭಂಧನಕ್ಕೀಡಾದಂತಾಗಿತ್ತು. ನದಿಯಲ್ಲಿ ಆನೆಗಳು ಇಳಂತಿಲ ಗ್ರಾಮದ ಕಡೆಗೆ ಸಾಗಿದರೆ ಆ ಕಡೆಯಿಂದ ಗರ್ನಾಲ್ ಶಬ್ಧ, ಉಪ್ಪಿನಂಗಡಿ ಗ್ರಾಮದತ್ತ ಮುಖ ಮಾಡಿದರೆ ಈ ಕಡೆಯಿಂದ ಗರ್ನಾಲ್ ಶಬ್ಧ ಕೇಳಿ ಬರುತ್ತಿತು. ಒಟ್ಟಿನಲ್ಲಿ ಜನವಸತಿ ಪ್ರದೇಶದತ್ತ ಬಾರದಂತೆ ಮಾಡಿದ ಪ್ರಯತ್ನಗಳೆಲ್ಲವೂ ಆನೆಯ ಪಾಲಿಗೆ ಅಹಿತಕರವಾಗಿ ಪರಿಣಮಿಸಿತ್ತು.
ಸ್ಥಳದಲ್ಲಿ ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭೂತೆ, ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ , ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪೆÇಲೀಸ್ ಅಧಿಕಾರಿಗಳು, ಸುಖಿತಾ ಶೆಟ್ಟಿ , ದಿನೇಶ್ ಬಿ. ನೇತೃತ್ವದ ಗೃಹರಕ್ಷಕ ದಳದ ತಂಡ ಘಟನಾ ಸ್ಥಳದಲ್ಲಿದ್ದು, ಆನೆಗಳ ಸಂಚಾರದ ಬಗ್ಗೆ ನಿಗಾವಹಿಸಿದ್ದಾರೆ.







