ಕೋಟೆಕಾರ್ ಪ. ಪಂ. ಸಾಮಾನ್ಯ ಸಭೆ| ಗುಜ್ರಿ ಅಂಗಡಿ ತೆರವು: ಸಭೆಯಲ್ಲಿ ವ್ಯಾಪಕ ಚರ್ಚೆ

ಉಳ್ಳಾಲ: ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗುಜ್ರಿ ಅಂಗಡಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ನಡೆದು ಕೋಲಾಹಲ ಸೃಷ್ಟಿಯಾದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುಜಿತ್ ಮಾಡೂರು ಅವರು ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಗುಜರಿ ಅಂಗಡಿಗಳು ತಲೆಯೆತ್ತಿ ನಿಂತಿದ್ದು, ಗುಜರಿ ಗ್ರಾಮ ಆಗಿ ಬಿಟ್ಟಿದೆ.ಇದರಿಂದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಗುಜರಿ ವಸ್ತುಗಳು ರಾಶಿ ಹಾಕುವುದರಿಂದ ತೊಂದರೆ ಆಗುತ್ತದೆ.ಇದನ್ನು ತೆರವುಗೊಳಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಧೀರಜ್ ಮಾತನಾಡಿ, ಕೋಟೆಕಾರು ಗುಜ್ರಿ ಗ್ರಾಮ ಎಂದು ಉಲ್ಲೇಖವಾಗಿದೆ.ಇಷ್ಟೊಂದು ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳು ಇರುವ ಕೋಟೆಕಾರ್ ಗ್ರಾಮ ವನ್ನು ಗುಜ್ರಿ ಗ್ರಾಮ ಎಂದಿರುವುದು ತಪ್ಪು. ಅವರು ಈ ಮಾತನ್ನು ಹಿಂಪಡೆದು ವಿಷಾಧ ವ್ಯಕ್ತಪಡಿಸಬೇಕು ಪಟ್ಟು ಹಿಡಿದರು.
ಕೋಟೆಕಾರ್ ವ್ಯಾಪ್ತಿಯಲ್ಲಿ ಮೂರು ಗುಜರಿ ಅಂಗಡಿ ಇದೆ. ಇದಕ್ಕೆ ಪರವಾನಿಗೆ ಇದೆ.ಆದರೆ ಅವರು ಸ್ವಚ್ಛತೆ ಕಾಪಾಡುವುದಿಲ್ಲ. ಸ್ವಚ್ಛತೆ ಯ ಕೊರತೆ ಇದೆ ಅಷ್ಟೇ ಎಂದು ವಿರೋಧ ಪಕ್ಷದ ನಾಯಕ ಅಹ್ಮದ್ ಅಜ್ಜಿನಡ್ಕ ಹೇಳಿದರು.
ಗ್ರಾಮದಲ್ಲಿರುವ ಮೂರು ಗುಜಿರಿ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಅವರಿಗೆ ನೋಟೀಸ್ ಕೂಡ ನೀಡಲಾಗಿದೆ ಎಂದು ಅಧ್ಯಕ್ಷ ದಿವ್ಯ ಸತೀಶ್ ಮಾಹಿತಿ ನೀಡಿದರು.
ನನ್ನ ಮಾತಿನಲ್ಲಿ ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಅಂಗಡಿಗೆ ಕೇವಲ ನೋಟೀಸ್ ನೀಡಿದರೆ ಸಾಕಾಗದು. ಅನಧಿಕೃತ ಗುಜಿರಿ ಅಂಗಡಿಗೆ ಅವಕಾಶ ನೀಡಬೇಡಿ. ಅಸಮರ್ಪಕವಾಗಿ ಇರುವ ಗುಜಿರಿ ಅಂಗಡಿ ತೆರವು ಮಾಡ ಬೇಕು. ಹೊರಗಡೆ ರಾಶಿ ಹಾಕಿರುವ ಗುಜಿರಿ ವಸ್ತುಗಳನ್ನು ತೆರವು ಮಾಡಿ ಎಂದು ಸುಜಿತ್ ಒತ್ತಾಯಿಸಿದರು. ಈ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಪ್ರತಿ ಸಭೆಯಲ್ಲೂ ಅಧಿಕಾರಿಗಳು ಜೊತೆ ಚರ್ಚೆ ಮಾಡಲು ಎರಡು ಗಂಟೆ ಬೇಕಾಗುತ್ತದೆ. ಇದರಿಂದ ಕಾರ್ಯಸೂಚಿ ಪಟ್ಟಿಯಲ್ಲಿರುವ ವಿಷಯಗಳು ಚರ್ಚೆ ಆಗುವುದಿಲ್ಲ. ಪ್ರತಿ ಸಭೆಯಲ್ಲೂ ಅಗತ್ಯ ವಿರುವ ಇಬ್ಬರು ಅಧಿಕಾರಿಗಳನ್ನು ಮಾತ್ರ ಕರೆದು ಚರ್ಚೆ ನಡೆಸಿ ಮುಗಿಸಬೇಕು. ಉಳಿದ ಸಮಯದಲ್ಲಿ ಕಾರ್ಯ ಸೂಚಿ ಪಟ್ಟಿಯಲ್ಲಿ ಇರುವ ವಿಷಯದ ಬಗ್ಗೆ ಚರ್ಚೆ ಆಗಬೇಕು. ಈ ಬಗ್ಗೆ ನಿರ್ಣಯ ಆಗಬೇಕು ಎಂದು ಅಹ್ಮದ್ ಬಾವ ಅಜ್ಜಿನಡ್ಕ ಹೇಳಿದರು.
ಈ ವಿಚಾರದಲ್ಲಿ ನಿರ್ಣಯ ಮಾಡುವುದು ಬೇಡ. ಮುಂದಿನ ಸಭೆಗೆ ಯಾವ ಅಧಿಕಾರಿ ಇರಬೇಕು ಎಂಬುದನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡುವ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು.
ಸಭೆಯಲ್ಲಿ ಒಬ್ಬರೇ ಸದಸ್ಯರು ಮಾತಾಡಬಾರದು.ಪ್ರತಿಯೊಬ್ಬರು ಅವರವರ ಸಮಸ್ಯೆ ಹೇಳಿದರೆ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಒಬ್ಬರೇ ಮಾತನಾಡುವುದು ಸರಿಯಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು. ಮಾತನಾಡಲು ಎಲ್ಲರಿಗೂ ಅವಕಾಶ ಇದೆ. ಒಬ್ಬರಿಗೆ ಮಾತ್ರ ಇರುವುದಲ್ಲ. ಸಿಕ್ಕ ಅವಕಾಶದಲ್ಲಿ ತಪ್ಪು ಮಾಹಿತಿ ನೀಡುವುದು ಬೇಡ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ ಎಂದು ಅಧ್ಯಕ್ಷ ದಿವ್ಯ ಸತೀಶ್ ಎಚ್ಚರಿಸಿದರು.
ಸಭೆ ಅಚ್ಚುಕಟ್ಟಾಗಿ ಇರಲಿ ಕೆಲವರು ತಡವಾಗಿ ಬಂದು ಸಹಿ ಹಾಕಿ ಹೋಗುತ್ತಾರೆ. ಇದಕ್ಕೆ ಅವಕಾಶ ಬೇಡ ಎಂದು ಸುಜಿತ್ ತಿಳಿಸಿದರು. ಸದಸ್ಯರಿಗೆ ಕೆಲವು ತುರ್ತು ಅವಶ್ಯಕತೆ ಇರುತ್ತದೆ ಈ ವೇಳೆ ಸಹಿ ಹಾಕಿ ಹೋಗುವವರು ಇದ್ದಾರೆ. ಇದು ತಪ್ಪಾಗುವುದಿಲ್ಲ ಎಂದು ಧೀರಜ್ ಹೇಳಿದರು.
ಕೋಟೆಕಾರ್ ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಚೀಟಿ ಬಿಟ್ಟು ಬರುವುದುಂಟು. ಇದರಿಂದ ತೊಂದರೆ ಆಗುತ್ತದೆ. ಈ ಕಾರಣದಿಂದ ಆರೋಗ್ಯ ಕೇಂದ್ರಕ್ಕೆ ಕಂಪ್ಯೂಟರ್ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಆರೋಗ್ಯಾಧಿಕಾರಿ ಸಭೆಯಲ್ಲಿ ಮನವಿ ಮಾಡಿದರು.
ಕಂಪ್ಯೂಟರ್ ವ್ಯವಸ್ಥೆ ಆರೋಗ್ಯ ಕೇಂದ್ರಕ್ಕೆ ಅಗತ್ಯ ಇದೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲು ಆಗುತ್ತದೆಯೇ ಎಂಬುದನ್ನು ನೋಡುತ್ತೇನೆ ಎಂದು ಅಧ್ಯಕ್ಷ ದಿವ್ಯ ಸತೀಶ್ ತಿಳಿಸಿದರು.
ಅಂಗನವಾಡಿ ಯಿಂದ ವಿತರಿಸುವ ಪುಷ್ಟಿಯನ್ನು ಯಾರು ಕೊಂಡು ಹೋಗುವುದಿಲ್ಲ. ಇದರ ಬದಲು ಬೇರೆ ಆಹಾರ ನೀಡಿ ಎಂದು ಸದಸ್ಯರು ಅಂಗನವಾಡಿ ಮೇಲ್ವಿಚಾರಕರ ಗಮನ ಸೆಳೆದರು.
ಪುಷ್ಠಿ ವಿವಿಧ ಕಾಳುಗಳನ್ನು ಉಪಯೋಗಿಸಿ ತಯಾರಿಸುವ ಆಹಾರ. ಇದನ್ನು ಉಪಯೋಗಿಸಿದರೆ ಉತ್ತಮ. ಆಹಾರ ಬದಲಾವಣೆ ಮಾಡಲು ಸರ್ಕಾರದ ಗಮನ ಸೆಳೆದಿದ್ದೇವೆ ಎಂದು ಅಂಗನವಾಡಿ ಮೇಲ್ವಿಚಾರಕರು ಸಭೆಗೆ ತಿಳಿಸಿದರು
ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ,ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.







