ಧಾರ್ಮಿಕ ಅಂಶದೊಂದಿಗೆ ಮೂಲಭೂತ ಬೆಳೆದರೆ ಅಪಾಯಕಾರಿ: ಲಕ್ಷ್ಮೀಶ ಗಬ್ಲಡ್ಕ

ಮಂಗಳೂರು: ಅಂದು ಆ ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆ ಜೊತೆಯಾಗಿದ್ದರು. ಇಂದು ಈ ಸಮಾಜದಲ್ಲಿ ಅಪನಂಬಿಕೆಗಳು ಹೆಚ್ಚುತ್ತಿವೆ. ಆ ಅಪನಂಬಿಕೆಯ ಮಧ್ಯೆಯೇ ಧರ್ಮಗಳ ಆಚರಣೆಯೂ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಅಂಶದೊಂದಿಗೆ ಮೂಲಭೂತವೂ ಬೆಳೆಯುತ್ತಿದ್ದು, ಇದು ತುಂಬಾ ಅಪಾಯಕಾರಿ ಯಾಗಿದೆ ಎಂದು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅಭಿಪ್ರಾಯಪಟ್ಟರು.
ಯುನಿವೆಫ್ ಕರ್ನಾಟಕದ ವತಿಯಿಂದ ಱಅಪನಂಬಿಕೆಗಳ ಮಧ್ಯೆ ಧರ್ಮಾಚರಣೆ ಎಂಬ ವಿಷಯದಲ್ಲಿ ಬಲ್ಮಠದ ಶಾಂತಿ ನಿಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವಧರ್ಮೀಯರೊಂದಿಗೆ ಸ್ನೇಹ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದುತ್ವವು ರಾಜಕೀಯವಾಗುತ್ತಿದೆ. ಮುಸ್ಲಿಮರು ಮತ್ತು ಕ್ರೈಸ್ತರು ಸಮಾಜದಲ್ಲಿ ಬದುಕಲು ಅನರ್ಹರು ಎಂಬ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳುವ ಯುವ ಸಮೂಹದಲ್ಲಿ ಅಸಹಿಷ್ಣುತೆಯೂ ಹೆಚ್ಚುತ್ತಿವೆ. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗುತ್ತಿದೆ. ಇದರಿಂದ ಅಂತರ ಹೆಚ್ಚಾಗುತ್ತಿದೆಯೇ ವಿನಃ ವಿಶ್ವಾಸ, ನಂಬಿಕೆ, ಒಗ್ಗೂಡುವಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಸಾಂಸ್ಕೃತಿಕವಾಗಿ ಒಳಗೊಂಡು ಸೌಹಾರ್ದ ವಾತಾವರಣ ರೂಪಿಸಲು ಪ್ರಯತ್ನಿಸಬೇಕಿದೆ ಎಂದು ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಬಿಜೈ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಪ್ಯಾರಿಶ್ ಪ್ರೀಸ್ಟ್ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ದಾನಾ ಮಾತನಾಡಿ ಏಸುಕ್ರಿಸ್ತ ಕಲಿಸಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ಕ್ರೈಸ್ತರು ಮಾಡುತ್ತಿದ್ದಾರೆ. ಅದುವೇ ಜೀವನದ ವಿಧಾನವಾಗಿದೆ ಎಂದು ಹೇಳಿದರು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರಿನ ಧರ್ಮ ರಕ್ಷಣಾ ಮೊಗವೀರ ವೇದಿಕೆಯ ಅಧ್ಯಕ್ಷ ನವೀನ್‌ಚಂದ್ರ ಶ್ರೀಯಾನ್, ಯುನಿವೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಅಬ್ದುರ‌್ರಹ್ಮಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುನಿವೆಫ್ ಪ್ರಧಾನ ಕಾರ್ಯದರ್ಶಿ ಯು.ಕೆ. ಖಾಲಿದ್ ಸ್ವಾಗತಿಸಿದರು. ಜುನೈದ್ ಕಿರಾಅತ್ ಪಠಿಸಿದರು. ಮುಹಮ್ಮದ್ ಹುದೈಫ್ ಕಾರ್ಯಕ್ರಮ ನಿರೂಪಿಸಿದರು.







