ಬೀಡಿ ಕಾರ್ಮಿಕರು ಕನಿಷ್ಟ ವೇತನ ಪಡೆಯಲು ಪ್ರಬಲ ಹೋರಾಟಕ್ಕೆ ಮುಂದಾಗಬೇಕು: ಬಾಲಕೃಷ್ಣ ಶೆಟ್ಟಿ

ಉಳ್ಳಾಲ: 2018ರಿಂದ ಬೀಡಿ ಕಾರ್ಮಿಕರಿಗೆ ಬಾಕಿ ಇರಿಸಿಕೊಂಡಿರುವ ತುಟ್ಟಿಭತ್ತೆಯ ಭಾಗವಾಗಿ ಪ್ರತೀ ಸಾವಿರ ಬೀಡಿಗೆ ರೂ 7 ರಂತೆ ಕೊಡುವುದಾಗಿ ಒಪ್ಪಿಕೊಂಡಿರುವ ಬೀಡಿ ಮಾಲಕರು ಈ ಪಾವತಿಯನ್ನು ವಿಳಂಬಿಸುತ್ತಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಪಾವತಿಸುವುದಾಗಿ ಭರವಸೆ ನೀಡಿದ ಮಾಲಕರು ಸಪ್ಟೆಂಬರ್ ಆದರೂ ಇನ್ನೂ ಪಾವತಿ ಮಾಡಿರುವುದಿಲ್ಲ. ಮಾತ್ರವಲ್ಲ 2024ರ ಕನಿಷ್ಠ ಕೂಲಿಯನ್ನೂ ನೀಡಿರುವುದಿಲ್ಲ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಲಿಲ್ಲ. ಅದ್ದರಿಂದ ಅಕ್ಟೋಬರ್ 7ರಿಂದ ಬೀಡಿ ಕಂಪೆನಿಗಳ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದೆಂದು ದ.ಕ.ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್ ನ ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿಯವರು ಹೇಳಿದರು.
ಅವರು ಇಂದು ತೊಕ್ಕೋಟುನಲ್ಲಿ ಜರುಗಿದ ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ ಯೂನಿಯನ್ ನ 31ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಈ ಮಾತನಾಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ,ಅವಿಭಜಿತ ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಬೀಡಿ ಉದ್ಯಮದ ಬಿಕ್ಕಟ್ಟನ್ನು ಬಂಡವಾಳವನ್ನಾಗಿಸಿದ ಬೀಡಿ ಮಾಲಕರು ಕಾರ್ಮಿಕರಿಗೆ ಭಾರೀ ಅನ್ಯಾಯವನ್ನು ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಹಿರಿಯ ಬೀಡಿ ಕಾರ್ಮಿಕರ ಮುಖಂಡ ಪದ್ಮಾವತಿ ಶೆಟ್ಟಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೀಡಿ ಕಾರ್ಮಿಕರ ಸಂಘಟನೆಯ ಹಿರಿಯ ಮುಖಂಡ ಸುಕುಮಾರ್ ತೊಕ್ಕೋಟು,ಜಯಂತ ನಾಯಕ್, ಸುಂದರ ಕುಂಪಲ, ಪ್ರಮೋದಿನಿ ಕಲ್ಲಾಪು, ರೈತ ಮುಖಂಡ ಕೃಷ್ಣಪ್ಪ ಸಾಲ್ಯಾನ್,ಬೀಡಿ ಕಾರ್ಮಿಕರ ನಾಯಕರಾದ ವಿಲಾಸಿನಿ ತೊಕ್ಕೋಟು, ರೋಹಿದಾಸ್ ಭಟ್ನಗರ, ಜನಾರ್ಧನ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.







