ತಲಪಾಡಿ ಗ್ರಾಮ ಸಭೆ: ರಾಷ್ಟ್ರೀಯ ಹೆದ್ದಾರಿ, ಟೋಲ್ ಸಮಸ್ಯೆಯದ್ದೇ ಚರ್ಚೆ

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಟೋಲ್ ಸಮಸ್ಯೆ ಉರಿಯದ ದಾರಿದೀಪ, ಸರ್ವಿಸ್ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ ಶಾಹುಲ್ ಹಾಗೂ ಬಶೀರ್ ಅವರನ್ನು ತಾರಾಟೆಗೈದ ಘಟನೆ ತಲಪಾಡಿ ಗ್ರಾಮದ ಗ್ರಾಮ ಸಭೆಯಲ್ಲಿ ನಡೆಯಿತು.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಇಸ್ಮಾಯಿಲ್ ಗ್ರಾಮ ಸಭೆಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಲಪಾಡಿ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು,ಕೆಸಿರೋಡ್ ನಿಂದ ತಲಪಾಡಿ ವರೆಗೆ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸೇತುವೆ ಕೆಳಗಡೆ ಮಣ್ಣು ಹಾಕಿದ ಕಾರಣ ನೀರು ಬ್ಲಾಕ್ ಆಗಿ ಸೊಳ್ಳೆಗಳ ಉತ್ಪತ್ತಿ ಆಗುತ್ತದೆ. ದಾರಿದೀಪ ಇಲ್ಲದೇ ಅಪಘಾತ ಸಂಭವಿಸಿ ಕೆಲವು ಜೀವಗಳು ಹೋಗಿವೆ. ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಯಿಂದ ಕೆಲವು ಮನೆಗಳಿಗೆ ನೀರು ನುಗ್ಗಿದ್ದೂ ಇದೆ. ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪರಿಹಾರ ಆಗುತ್ತಿಲ್ಲ. ಈ ಸಮಸ್ಯೆಗಳ ಪರಿಹಾರ ಶೀಘ್ರ ಆಗಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳನ್ನು ಆಗ್ರಹಿಸಿದರು.
ಈ ಬಗ್ಗೆ ಗಮನಹರಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ ಗಳಾದ ಶಾಹುಲ್ ಹಾಗೂ ಬಶೀರ್ ಭರವಸೆ ನೀಡಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ನಮಗೆ ಭರವಸೆ ಬೇಡ ಲಿಖಿತ ರೂಪದಲ್ಲಿ ಬರೆದು ಕೊಡಬೇಕು. ಟೋಲ್ ನಲ್ಲಿ ಸ್ಥಳೀಯರಿಗೆ ಎಲ್ಲಾ ದಾರಿಗಳಲ್ಲಿ ಉಚಿತವಾಗಿ ಹೋಗಲು ಅವಕಾಶ ನೀಡಬೇಕು. ಆಧಾರ್ ಕಾರ್ಡ್ ಆಧಾರದಲ್ಲಿ ಉಚಿತವಾಗಿ ಪ್ರವೇಶ ನೀಡಬೇಕು. ತಲಪಾಡಿ ಯಿಂದ ಕೆಸಿರೋಡ್ ವರೆಗಿನ ದಾರಿದೀಪ ಸರಿಪಡಿಸಬೇಕು.ಟೋಲ್ ಸಮಸ್ಯೆ ಇತ್ಯರ್ಥ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಚರಂಡಿ ನಿರ್ಮಾಣ, ಮಣ್ಣು ತೆರವು ಕಾರ್ಯಾಚರಣೆ ಆಗಬೇಕು ಎಂದು ಪಟ್ಟು ಹಿಡಿದರು.
ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.ಈ ವೇಳೆ ಪಿಡಿಒ ಕೇಶವ ಪೂಜಾರಿ ಅವರು ಗ್ರಾಮಸ್ಥರ ಬೇಡಿಕೆಗಳನ್ನು ನಿರ್ಣಯ ಮಾಡಿ ಸಂಬಂಧ ಪಟ್ಟವರ ಗಮನ ಹರಿಸಲಾಗುವುದು ಎಂದರು.
ಗ್ರಾಮ ಸಭೆಗೆ ಕಾರ್ಯ ಸೂಚಿ ಇದೆ.ಅದರ ಪ್ರಕಾರ ಸಭೆ ನಡೆಯಲಿ ಎಂದು ನೋಡೆಲ್ ಅಧಿಕಾರಿ ಸುಜನಾ ಹೇಳಿದರು. ವಿದ್ಯಾನಗರ ರಸ್ತೆ ಹದಗೆಟ್ಟು ಹೋಗಿದೆ. ಅಲ್ಲಲ್ಲಿ ನೀರು ತುಂಬಿ ಸೊಳ್ಳೆಗಳ ಕಾಟ ಶುರುವಾಗಿದೆ.ರಾತ್ರಿ ವಿದ್ಯುತ್ ಹೋದರೆ ಬೆಳಗ್ಗಿನ ವರೆಗೆ ಇರುವುದಿಲ್ಲ.ಈ ಸಮಸ್ಯೆಗೆ ಪರಿಹಾರ ಯಾಕಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನಿಸಿದರು.
ಸಿಂಗಲ್ ಸೈಟ್,ಮೂಡ ಪರವಾನಿಗೆ ಆಗದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಡೋರ್ ನಂಬರ್ ನೀಡುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಸಮರ್ಪಕ ಕುಡಿಯುವ ನೀರು ಇಲ್ಲದೆ ಪರಿತಪಿಸುತ್ತಿದ್ದರೂ ಪಂಚಾಯತ್ ಕುಡಿಯುವ ನೀರು ನೀಡದ ಬಗೆ ವೃದ್ಧೆ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಪಿಡಿಒ ಕೇಶವ ಪೂಜಾರಿ ಸಭೆಯಲ್ಲಿ ಕೆಲವು ವಿಷಯಗಳ ಬಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸುಜನಾ ನೋಡೆಲ್ ಅಧಿಕಾರಿಯಾಗಿದ್ದರು.ಗ್ರಾ.ಪಂ.ಲೆಕ್ಕ ಸಹಾಯಕ ಮಂಜುನಾಥ ಸ್ವಾಗತಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಆಯಾ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.







