ಮಂಗಳೂರು ಪ್ರಸಾದ್ ನೇತ್ರಾಲಯದಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು, ಸೆ.4: ಪ್ರಸಾದ್ ನೇತ್ರಾಲಯ ಮಂಗಳೂರು ಚಿಕಿತ್ಸಾಲಯದಲ್ಲಿ ಶಿಕ್ಷಕರ ದಿನವನ್ನು ಇತ್ತೀಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಅಥಿತಿಗಳಾಗಿ ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಶಿಕ್ಷಕರು ಕೇವಲ ಪಾಠಗಳನ್ನು ಕಲಿಸುವವರಲ್ಲ, ಅವರು ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಅವರ ಕೊಡುಗೆ ಅಪಾರ. ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಅಕ್ಷರ ಜ್ಞಾನವನ್ನು ಮಾತ್ರವಲ್ಲದೆ, ಜೀವನದ ಮೌಲ್ಯಗಳನ್ನು, ಉತ್ತಮ ಸಂಸ್ಕೃತಿಯನ್ನು ಮತ್ತು ನೈತಿಕತೆಯನ್ನು ಕಲಿಸುತ್ತಾರೆ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಮಹತ್ವವನ್ನು ವಿವರಿಸಿದರು. ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಅವರು ಕೇವಲ ಅಕ್ಷರ ಕಲಿಸುವುದಲ್ಲದೆ, ಬದುಕಿನ ಮೌಲ್ಯಗಳನ್ನು ತಿಳಿಸುವ ಮೂಲಕ ಉತ್ತಮ ಪ್ರಜೆಗಳನ್ನು ರೂಪಿಸುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಶಿಕ್ಷರುಗಳಾದ ಪ್ರೊ.ಜಯಕರ ಭಂಡಾರಿ, ಪ್ರಕಾಶ್ ನಾಕ್, ವನಿತಾ ದೇವಾಡಿಗ, ಡಾ.ಐಟಾ ಡಿಸೋಜ, ಪದ್ಮನಾಭನ್ ಕೆ., ಸುಮನಾ ರೈ ಎನ್., ಸೌಸ್ರೀನ್, ಮೋಹನರಾಜ್, ಸುಬ್ರಹ್ಮಣ್ಯ, ಚಂಚಲಾಕ್ಷಿ, ಶಿವಪ್ರಸಾದ್, ಅಸ್ರೀನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ನೇತ್ರದಾನದ ಮಹತ್ವದ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು. ಆಸ್ಪತ್ರೆಯ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಡಾ.ವಿಕ್ರಮ್ ಜೈನ್, ಡಾ.ಹರೀಶ್ ಶೆಟ್ಟಿ, ಡಾ.ಜಕೋಬ್ ಚಕೋ, ಡಾ.ಶಿಬಿನ್ ಗಿರೀಶ್, ಡಾ.ಶ್ರುತಿ ಭಟ್, ಡಾ.ತೇಜಸ್ವಿನಿ ಉಪಸ್ಥಿತರಿದ್ದರು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಮತ್ತು ರೋಗಿಗಳ ಸಂಬಂಧಿಕರು ಭಾಗವಹಿಸಿದ್ದರು.







