ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಣಾ ಕೌಶಲ್ಯ ತರಬೇತಿ| ಎನ್.ಎಸ್.ಎಸ್ ಬದುಕು ಕಲಿಸುತ್ತದೆ: ಡಾ. ನವೀನ್ ಶೆಟ್ಟಿ

ಕೊಣಾಜೆ: "ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ಎನ್.ಎಸ್.ಎಸ್ ದಾರಿದೀಪವಾಗುತ್ತದೆ. ಸಾಧಕರಲ್ಲಿ ಬಹುಪಾಲು ಜನ ಎನ್.ಎಸ್.ಎಸ್ ಹಿನ್ನೆಲೆಯಿಂದಲೇ ಬೆಳೆದು ಬಂದವರು. ಎನ್.ಎಸ್.ಎಸ್ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಹಬಾಳ್ವೆ, ಪರೋಪಕಾರ, ಸೇವೆ ಮೊದಲಾದ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮಲ್ಲಿನ ಪ್ರತಿಭೆಗಳ ಅನಾವರಣಕ್ಕಾಗಿ ಸೂಕ್ತ ವೇದಿಕೆಗಳನ್ನು ಪಡೆಯುತ್ತಾರೆ ಎಂದು ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ನಿಯೋಜಿತ ಅಧ್ಯಕ್ಷ ಡಾ.ನವೀನ್ ಶೆಟ್ಟಿ ಕೆ. ಹೇಳಿದರು.
ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಹಾಗೂ ನಂತೂರಿನ ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳಿಗಾಗಿ ದೇರಳಕಟ್ಟೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಾ ಕೌಶಲ ತರಬೇತಿ ಶಿಬಿರ 'ಆಪತ್ಬಂಧು' ವಿನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬದುಕಿಗೆ ಕೇವಲ ಪುಸ್ತಕದಲ್ಲಿನ ವಿಚಾರಗಳು ಮಾತ್ರವಲ್ಲದೆ ವಾಸ್ತವಿಕವಾದ ಪ್ರಾಯೋಗಿಕ ಜ್ಞಾನಗಳೂ ಅಗತ್ಯ. ಹಾಗಾಗಿ ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಣಾ ಕೌಶಲ್ಯಗಳ ತರಬೇತಿ ವಿದ್ಯಾರ್ಥಿ ದೆಸೆಯಲ್ಲಿ ಪಡೆಯುವುದು ಬಹಳ ಅವಶ್ಯಕ. ಎನ್.ಎಸ್.ಎಸ್ ಬದುಕಲು ಹಾಗೂ ಬದುಕಿಸಲು ಕಲಿಸುತ್ತದೆ ಎಂದರು.
ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ಉಪಪ್ರಾಂಶುಪಾಲೆ ಪ್ರೊ.ಡಿ ಸಬಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಶಿಬಿರದ ಔಚಿತ್ಯ ಹಾಗೂ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಜೀವಿತಾ ಆಳ್ವ, ಪ್ರೊ. ಸುಖೇಶ್, ಪ್ರೊ. ಬಸವರಾಜ್, ಪ್ರೊ. ದೀಪ್ತಿ ಮೊದಲಾದವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತುರ್ತು ಚಿಕಿತ್ಸೆ ಹಾಗೂ ಜೀವರಕ್ಷಕ ಚಿಕಿತ್ಸೆಗಳಾದ ಸಿ.ಪಿ.ಆರ್ ಬ್ಯಾಂಡೇಜ್, ಮೂರ್ಛೆ ರೋಗ ಹಾಗೂ ಹಾವು ಕಡಿತಗಳಿಗೆ ತಕ್ಷಣದ ಚಿಕಿತ್ಸೆ ಇವೇ ಮೊದಲಾದ ವಿಷಯಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ನಂತೂರಿನ ಡಾ.ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಸಂತೋಷ್ ಶೆಟ್ಟಿ, ಸಹಯೋಜನಾಧಿಕಾರಿ ವಿದ್ಯಾರಾಣಿ ಅಳ್ವ ಮೊದಲಾದವರು ಉಪಸ್ಥಿತರಿದ್ದರು.







