ಕೊಂಕಣಿ ಅಕಾಡಮಿಯಿಂದ ಎರಿಕ್ ಒಝೇರಿಯೊಗೆ ನುಡಿನಮನ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ಇತ್ತೀಚೆಗೆ ನಿಧನರಾದ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝೇರಿಯೊ ಅವರಿಗೆ ನಗರದ ಬೆಂದೂರು ಸಂತ ಸೆಬೆಸ್ಟಿಯನ್ ಮಿನಿ ಹಾಲಿನಲ್ಲಿ ಗುರುವಾರ ನುಡಿನಮನ ಸಲ್ಲಿಸಲಾಯಿತು.
ಎರಿಕ್‌ರ ಪತ್ನಿ ಜೊಯ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎರಿಕ್ ಒಝೇರಿಯೊರ ಕಾರ್ಯಕ್ಷೇತ್ರದ ವಿವಿಧ ಮಜಲುಗಳಾದ ವ್ಯಕ್ತಿ ಮತ್ತು ಶಕ್ತಿ ಬಗ್ಗೆ ವಾಲ್ಟರ್ ನಂದಳಿಕೆ, ಕೊಂಕಣಿ ಅಕಾಡಮಿ ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಸ್ಟೀವನ್ ಕ್ವಾಡ್ರಸ್, ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರದ ಬಗ್ಗೆ ಚರಣ್ ಮಲ್ಯ, ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರೇರಣಾಶಕ್ತಿ ಬಗ್ಗೆ ಕನ್ಸೆಪ್ಟಾ ಫೆರ್ನಾಂಡಿಸ್ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕೊಂಕಣಿ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತನ್ನ ಮತ್ತು ಎರಿಕ್‌ರ ೩೭ ವರ್ಷಗಳ ಒಡನಾಟವನ್ನು ಮೆಲುಕು ಹಾಕಿದರು.
ಪುತ್ರಿ ಡಾ. ರಶ್ಮಿ, ಅಳಿಯ ಸಂಗೀತಗಾರ ಆಲ್ವಿನ್ ಫೆರ್ನಾಂಡಿಸ್, ಮೊಮ್ಮಕ್ಕಳಾದ ಅಮನ್, ಜಿಯಾ, ಅಕಾಡಮಿಯ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಲೇಖಕರ ಒಕ್ಕೂಟದ ಮುಖ್ಯಸ್ಥ ರಿಚ್ಚಾರ್ಡ್ ಮೊರಾಸ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಮತ್ತಿತರರು ಪಾಲ್ಗೊಂಡಿದ್ದರು.
ಎರಿಕ್‌ರ ಅಭಿಮಾನಿ ನಾರಾವಿಯ ಗೋಪಾಲಕೃಷ್ಣ ಸ್ಥಳದಲ್ಲೇ ರಚಿಸಿದ ಕವಿತೆಗೆ ಗಾಯಕ ರೊನಿ ಕ್ರಾಸ್ತಾ ಸ್ವರ ಸಂಯೋಜಿಸಿ ಹಾಡಿದರು. ಅಕಾಡಮಿಯ ಸದಸ್ಯ ಸಮರ್ಥ್ ಭಟ್ ವಂದಿಸಿದರು. ರೊನಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.







