ಮಳವೂರು ನೂತನ ಸೇತುವೆ ಉದ್ಘಾಟನೆ

ಮಂಗಳೂರು, ಸೆ.6: ರಾಜ್ಯ ಲೋಕೋಪಯೋಗಿ ಇಲಾಖೆ ವತಿಯಿಂದ 60 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಳವೂರು ನೂತನ ಸೇತುವೆ ಹಾಗೂ ಏರ್‌ಪೋರ್ಟ್ ಸಿ.ಸಿ ರಸ್ತೆಯನ್ನು ಶನಿವಾರ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಟಿಸಿದರು.
ಸುಮಾರು 7 ತಿಂಗಳ ಹಿಂದೆ ವಾಹನ ಸಂಚಾರ ಆರಂಭಗೊಂಡಿದ್ದ ನೂತನ ಸೇತುವೆಯನ್ನು ಶನಿವಾರ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಶಾಸಕ ಉಮನಾಥ ಕೋಟ್ಯಾನ್ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಒಪ್ಪಿಗೆ ಮೇರೆಗೆ ಸೇತುವೆ ಉದ್ಘಾಟಿಸಿರುವೆ. ಹೊಸ ಸೇತುವೆ ಪಕ್ಕದಲ್ಲಿರುವ ಹಳೆ ಸೇತುವೆ ದುರಸ್ತಿ ಕಾರ್ಯಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅನುದಾನ ಬಿಡುಗಡೆಯಾದೊಡನೆ ಕಾಮಗಾರಿ ಆರಂಭವಾಗಲಿದೆ. ದುರಸ್ತಿ ಬಳಿಕ ಹಳೆಯ ಸೇತುವೆಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.
ಏರ್‌ಪೋರ್ಟ್ ಭಾಗದಿಂದ ವಾಹನ ದಟ್ಟಣಿ ಇರುವುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದ ಉಮಾನಾಥ ಕೋಟ್ಯಾನ್ ಈ ಭಾಗದಲ್ಲಿ ಕೆಲವು ರಸ್ತೆ ಕೆಟ್ಟು ಹೋಗಿವೆ. ಕರ್ಮಾರು ರಸ್ತೆಯ ಕಾಮಗಾರಿಯು ಮಳೆಗಾಲ ಮುಗಿದೊಡನೆ ಆರಂಭವಾಗಲಿದೆ ಎಂದರು.
ಬಿಜೆಪಿ ಮುಖಂಡ ಗಣೇಶ್ ಅರ್ಬಿ ಸ್ವಾಗತಿಸಿದರು. ಮೂಡಬಿದ್ರೆ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್ (ಆರ್‌ಕೆ), ಬಜ್ಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕೆಂಜಾರು, ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್, ಜೋಕಿಂ ಡಿಕ್ರಾಸ್ತ, ದಿನೇಶ್ ಶೆಟ್ಟಿ, ಜಯಂತ್ ತೋಕೂರು, ಲೋಕೇಶ್ ಪೂಜಾರಿ ಬಜ್ಪೆ, ಅಭಿಲಾಷ್ ಶೆಟ್ಟಿ, ಸತೀಶ್ ದೇವಾಡಿಗ, ಸುಮಾ ಬಿ. ಶೆಟ್ಟಿ, ಸುಹಾಸಿನಿ, ಜಿತೇಶ್ ಕೆಂಜಾರು, ಉಮೇಶ್ ಪೂಜಾರಿ, ಪ್ರವೀಣ್ ಶೆಟ್ಟಿ ಕಟ್ಟಪುಣಿ, ಲಕ್ಷ್ಮಣ್ ಬಂಗೇರ ಮತ್ತು ನೂತನ ಸೇತುವೆ ನಿರ್ಮಾಣ ಕಂಪೆನಿ ಮೊಗರೋಡಿ ಕನ್‌ಸ್ಟ್ರಕ್ಷನ್‌ನ ಪ್ರಧಾನ ಇಂಜಿನಿಯರ್ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.







