ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ವಿಜೇತರಿಗೆ ದ.ಕ. ಜಿಲ್ಲಾಡಳಿತ ಗೌರವ

ಮಂಗಳೂರು, ಸೆ.6: ಅಮೆರಿಕಾದ ಜೋಸ್ ಕೋಸ್ಟರಿಕದಲ್ಲಿ ಆಗಸ್ಟ್‌ನಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾದ ದ.ಕ.ಜಿಲ್ಲೆಯ ಕ್ರೀಡಾಪಟುಗಳಿಗೆ ಶನಿವಾರ ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಯಿತು.
ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಕಟೀಲು ಕೊಂಡೆಮೂಲ ಗ್ರಾಮದ ಕೀರ್ತನ್ ಕಟೀಲು 53 ಕೆಜಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 5 ಚಿನ್ನದ ಪದಕ ಗಳಿಸಿದ್ದಾರೆ.
ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 105 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಮಂಗಳೂರಿನ ಸಿದ್ದಾರ್ಥ್ ಸುವರ್ಣ 5ನೇ ಸ್ಥಾನ ಪಡೆದಿರುತ್ತಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಕ್ರೀಡಾಪಟುಗಳನ್ನು ಹಾಗೂ ಸ್ಪರ್ಧೆಯಲ್ಲಿ ಭಾರತದ ಕೋಚ್ ಆಗಿದ್ದ ಸತೀಶ್ ಕುಮಾರ್ ಕುದ್ರೋಳಿ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಸರಕಾರದಿಂದಲೂ ಸೂಕ್ತ ನೆರವು ದೊರಕಿಸಲು ಶಿಫಾರಸು ಮಾಡುವೆ. ಜಿಲ್ಲೆಯಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಗೆ ಇನ್ನಷ್ಟು ಬೆಂಬಲ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ದ.ಕ. ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಉಮೇಶ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.







