ಚಂದ್ರಗ್ರಹಣ: ಮಂಗಳೂರಿನಲ್ಲಿ ಕಣ್ತುಂಬಿಕೊಂಡ ಜನತೆ; ಪಿಲಿಕುಳದಲ್ಲಿ ವೀಕ್ಷಣೆಗೆ ವಿಶೇಷ ವ್ಯವಸ್ಥೆ

ಮಂಗಳೂರು, ಸೆ.8: ಖಗ್ರಾಸ ಚಂದ್ರಗ್ರಹಣವನ್ನು ರವಿವಾರ ರಾತ್ರಿ ನಗರದ ಜನರು ವೀಕ್ಷಿಸಿದರು.
ರಾತ್ರಿ 11 ಗಂಟೆ ಹೊತ್ತಿಗೆ ಚಂದ್ರನು ಸಂಪೂರ್ಣವಾಗಿ ಭೂಮಿಯ ಗಾಢ ನೆರಳಿನಲ್ಲಿ ಮರೆಯಾಗಿದ್ದ. ಚಂದ್ರಗ್ರಹಣ ಆರಂಭವಾಗುವ ಹೊತ್ತಿಗೆ ಮಳೆ ಇರಲಿಲ್ಲ. ಆನಂತರ ಕೆಲವಡೆ ಮಳೆ ಕಾಣಿಸಿಕೊಂಡು ವೀಕ್ಷಣೆಗೆ ಅಡ್ಡಿಯಾಗಿತ್ತು.
ರಾತ್ರಿ 9:58ಕ್ಕೆ ಚಂದ್ರಗ್ರಹಣ ಆರಂಭಗೊಂಡಿತ್ತು. ಭೂಮಿಯ ನೆರಳು ನಿಧಾನವಾಗಿ ಆವರಿಸುತ್ತಾ 11 ಗಂಟೆಗೆ ಚಂದ್ರನು ಮರೆಯಾಗಿದ್ದ. ಆಕಾಶದಲ್ಲಿ ಖಗ್ರಾಸ ಚಂದ್ರಗ್ರಹಣ ಮಧ್ಯರಾತ್ರಿ 12:22ರ ತನ ಇತ್ತು. ರಾತ್ರಿ 1:26ಕ್ಕೆ ಗ್ರಹಣವು ಮುಕ್ತಾಗೊಂಡಿತು.
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ವಿಶೇಷ ವ್ಯವಸ್ಥೆ: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕರಿಗೆ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಖಗ್ರಾಸ ಚಂದ್ರಗ್ರಹಣದ ಅಪೂರ್ವ ವಿದ್ಯಮಾನವನ್ನು ದೂರದರ್ಶಕ ಮತ್ತು ್ತ ದುರ್ಬೀನುಗಳ ಮೂಲಕ ವೀಕ್ಷಿಸಿದರು.
ರಾತ್ರಿ ಸುಮಾರು 8:58ಕ್ಕೆ ಚಂದ್ರಗ್ರಹಣದ ವೀಕ್ಷಣೆಗೆ ಜನರು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಜಮಾಯಿಸಿದ್ದರು. 9:58ಚಂದ್ರಗ್ರಹಣವು ಆರಂಭವಾಗಿತ್ತು. ಸುಮಾರು 11 ಗಂಟೆಯಿಂದ ಚಂದ್ರನು ಸಂಪೂರ್ಣವಾಗಿ ಮರೆಯಾ ಗಿದ್ದನು. ಭೂಮಿಯ ಗಾಢ ನೆರಳಿನಲ್ಲಿ ಕೆಂಪು ಚಂದ್ರನನ್ನು ನೋಡುವುದೇ ರೋಚಕವಾಗಿತ್ತು. ಈ ಕ್ಷಣದಿಂದ ಮಧ್ಯ ರಾತ್ರಿ 12:22ರ ವರೆಗೆ (ಸುಮಾರು 1ಗಂಟೆ 22 ನಿಮಿಷ) ಖಗ್ರಾಸ ಚಂದ್ರಗ್ರಹಣವನ್ನು ಬಂದಂತಹ ಸಾರ್ವಜನಿ ಕರು ಕಣ್ತುಂಬಿಕೊಂಡರು. ಇದೇ ಸಂದರ್ಭದಲ್ಲಿ ಕೇಂದ್ರ ಕ್ಯುರೇಟರ್ ಜಗನ್ನಾಥ್, ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್, ಗ್ರಹಗಳು, ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಇತರ ತಾಂತ್ರಿಕ ಸಿಬ್ಬಂದಿ ಸಹಕಾರ ನೀಡಿದರು. 250 ಅಧಿಕ ಮಂದಿ ಪಿಲಿಕುಳದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ ಮಾಡಿದರು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.







