ಕಂಕನಾಡಿ – ಪಂಪವೆಲ್ ರಸ್ತೆ ತುರ್ತು ದುರಸ್ತಿಗೆ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಆಗ್ರಹ

ಮಂಗಳೂರು: ನಗರದ ಕಂಕನಾಡಿ ಯಿಂದ ಪಂಪವೆಲ್ ಸಂಪರ್ಕಿಸುವ ಮುಖ್ಯರಸ್ತೆ ಇದೀಗ ತೀರಾ ಹದಗೆಟ್ಟು ಸಂಚಾರಕ್ಕೆ ಅಡಚಣೆಯಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು ಹಾಗೂ ಬಸ್ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಸ್ತೆಯ ಹಾಳಾದ ಸ್ಥಿತಿಯಿಂದಾಗಿ ಅಪಘಾತದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಈ ರಸ್ತೆಯ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಒತ್ತಾಯಿಸಿದೆ.
ಸಾರಿಗೆ ನೌಕರರ ದಿನನಿತ್ಯದ ಕೆಲಸವೇ ಜೀವದ ಹಂಗಿನಲ್ಲಿದೆ. ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆಗಾರಿಕೆ ಆದರೂ, ರಸ್ತೆ ಪರಿಸ್ಥಿತಿ ನೌಕರರ ಕೈಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಎಲ್ಲರೂ ಒಟ್ಟಾಗಿ ಗಮನಹರಿಸಿ ಈ ರಸ್ತೆ ದುರಸ್ತಿ ತಕ್ಷಣ ಕೈಗೊಳ್ಳುವಂತೆ ಸಂಘ ಮನವಿ ಮಾಡಿದೆ.
"ಮಂಗಳೂರಿನ ಸಾರಿಗೆ ವ್ಯವಸ್ಥೆಯ ದೈನಂದಿನ ನಾಡಿಯೇ ಈ ರಸ್ತೆ. ಇದನ್ನು ನಿರ್ಲಕ್ಷಿಸುವುದಾದರೆ, ಅದು ನೇರವಾಗಿ ಜನಜೀವನವನ್ನು ನಿರ್ಲಕ್ಷಿಸುವಂತಾಗಿದೆ. ತ್ವರಿತ ಕ್ರಮ ಕೈಗೊಳ್ಳುವುದು ಎಲ್ಲರ ಜವಾಬ್ದಾರಿ" ಎಂದು ಸಂಘದ ಪ್ರಕಟನೆ ತಿಳಿಸಿದೆ.





