ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸುವವರು ನಿಜವಾದ ಶಿಕ್ಷಕ: ರಾಜು ಮೊಗವೀರ.

ಉಳ್ಳಾಲ: ಶಿಕ್ಷಕರ ಮೌಲ್ಯಾಧಾರಿತ ಭೋದನೆಯು ವಿದ್ಯಾರ್ಥಿಗಳಲ್ಲಿ ಎಂದಿಗೂ ಸಾಕ್ಷಿಪ್ರಜ್ನೆಯಾಗಿ ಕಾಡುತ್ತಿರುತ್ತದೆ. ಪಾಠ, ಪರೀಕ್ಷೆಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವವರೇ ನಿಜವಾದ ಶಿಕ್ಷಕರಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ.ರಾಜು ಮೊಗವೀರ ಅಭಿಪ್ರಾಯಪಟ್ಟರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಭಿನ್ನ ಹಿನ್ನಲೆಯಿಂದ ಬಂದ ವಿದ್ಯಾರ್ಥಿಗಳನ್ನು ಒಂದು ಕ್ಲಾಸ್ ರೂಮಲ್ಲಿ ಸೇರಿಸಿ ಅವರನ್ನು ಸಂಬಾಲಿಸವುದು ಅಷ್ಟು ಸುಲಭವಲ್ಲ.ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದನ್ನು ವೃತ್ತಿಯೆಂದು ಭಾವಿಸದೆ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಮಾರ್ಗದರ್ಶನವನ್ನೂ ನೀಡಬೇಕು ಎಂದು ಕರೆ ನೀಡಿದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರು,ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಕೆ.ಆರ್. ಚಂದ್ರ , ಡಾ.ಇಸ್ಮಾಯಿಲ್ , ಸಿರಿಲ್.ವಿ.ವೇಗಸ್ ಅವರನ್ನು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈಶ್ವರ್ ,ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ದಾಮೋದರ್,ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ,ಹೈದರ್ ಪರ್ತಿಪ್ಪಾಡಿ,ಉಪಾಧ್ಯಕ್ಷರುಗಳಾದ ಯು.ಪಿ. ಆಲಿಯಬ್ಬ, ದೇವಕಿ.ಆರ್.ಉಳ್ಳಾಲ್,ಕೋಶಾಧಿಕಾರಿ ಆನಂದ.ಕೆ.ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಮತ್ತು ಕೆ.ಎಮ್.ಕೆ ಮಂಜನಾಡಿ ನಿರೂಪಿಸಿದರು.ಶಶಿಕಾಂಥಿ ವಂದಿಸಿದರು.







