ಟೈಕ್ವಾಂಡೋ ಚಾಂಪಿಯನ್ ಶಿಪ್: ದ.ಕ.ಜಿಲ್ಲೆಗೆ ಎರಡು ಪದಕ

ಮಂಗಳೂರು, ಸೆ.12: ದ.ಕ. ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್- 2025ರಲ್ಲಿ 2 ಪದಕಗಳು ದೊರೆತಿವೆ.
ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ ದ.ಕ. ಜಿಲ್ಲೆಯ ಟೈಕ್ವಾಂಡೋ ತಂಡವು ಉತ್ತಮ ಪ್ರದರ್ಶನ ನೀಡಿದೆ. ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಹಮ್ಮದ್ ನಿಹಾಲ್ ನಝೀರ್ 69 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಮುಹಮ್ಮದ್ ಅಯಾನ್ 82 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಈ ಸಾಧನೆಯೊಂದಿಗೆ ಇಬ್ಬರು ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ-2025ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಚಿನ್ನದ ಪದಕ ಗೆದ್ದ ಮುಹಮ್ಮದ್ ನಿಹಾಲ್ ನಝೀರ್ ಮಂಗಳೂರಿನ ಯೆನಪೋಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪಿಸಿಎಂಸಿ ವಿಭಾಗದ ವಿದ್ಯಾರ್ಥಿಯಾಗಿದ್ದು, ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ದಿ.ಅಬ್ದುಲ್ ನಝೀರ್ ಮುಹಮ್ಮದ್ ಹಾಗೂ ಸುಮಯ್ಯಾ ದಂಪತಿಯ ಪುತ್ರನಾಗಿದ್ದಾರೆ.
ಬೆಳ್ಳಿ ಪದಕ ಗೆದ್ದ ಮುಹಮ್ಮದ್ ಅಯಾನ್ ತುಂಬೆ ಬಿಎ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಯಾಗಿದ್ದು, ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಜಿ.ಕೆ. ಮುಹಮ್ಮದ್ ಆರಿಫ್ ಮತ್ತು ನಸೀಮಾ ದಂಪತಿಯ ಪುತ್ರನಾಗಿದ್ದಾರೆ.
ದ.ಕ.ಜಿಲ್ಲಾ ಟ್ವೆಕಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹ ತರಬೇತುದಾರ ಮೆಹೂಲ್ ಬಂಗೇರಾ ಈ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ.







