ಸಾಮಾಜಿಕ ಪಿಡುಗುಗಳಿಗೆ ಮೌನ ಸಂವಿಧಾನಕ್ಕೆ ಎಸಗುವ ಅಪಚಾರ : ನ್ಯಾ.ಗೋವಿಂದ ಮಾಥುರ್

ಮಂಗಳೂರು, ಸೆ.14 : ಸಾಂವಿಧಾನಿಕ ಮೌಲ್ಯಗಳು ಸರ್ವೋಚ್ಛವಾಗಿದ್ದು, ನಮ್ಮ ಕಣ್ಣೆದುರು ಕಾಣುವ ಸಾಮಾಜಿಕ ಪಿಡುಗುಗಳನ್ನು ಈ ಸಾಂವಿಧಾನಿಕ ಮೌಲ್ಯಗಳ ಮೂಲಕ ಎದುರಿಸಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ರವಿವಾರ ಎಂ.ಎಸ್. ಕೃಷ್ಣ ಮೆಮೋರಿಯಲ್ ಟ್ರಸ್ಟ್, ಸಮದರ್ಶಿ ವೇದಿಕೆ ಹಾಗೂ ಹೊಸತು ಪತ್ರಿಕೆಯ ಸಹಭಾಗಿತ್ವದಲ್ಲಿ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ಸನ್ನಿವೇಶದಲ್ಲಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಗಳ ಸಮತೋಲನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸಮಾಜದಲ್ಲಿಂದು ಸಾಮಾಜಿಕ ಪಿಡುಗುಗಳನ್ನೇ ನಮ್ಮ ಸಂಪ್ರದಾಯ, ಆಚರಣೆ ಎಂಬ ಹೆಸರಿನಲ್ಲಿ ವಿಜೃಂಭಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮೌನ ವಹಿಸುವುದು ನಾವು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಎಸಗಿದಂತೆ ಎಂದವರು ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನೈಜ ಸಾರದ ಬಗ್ಗೆ ವಿವರ ನೀಡಿದ ಅವರು, ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸುವುದು, ಕೆಲವು ಜನರಿಗೆ ಜನರ ಪ್ರತಿನಿಧಿಗಳಾಗಿ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಕುಳಿತುಕೊಳ್ಳು ಅವಕಾಶ ನೀಡಿ, ಅವರು ಕೋಟ್ಯಂತರ ಜನರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳುವುದನ್ನು ಪ್ರಜಾಪ್ರಭುತ್ವವೆಂದು ಪರಿಗಣಿಸಲಾಗದು. ಒಮ್ಮೆ ಚುನಾವಣೆಯ ಬಳಿಕ ಓರ್ವರನ್ನು ನಮ್ಮ ಪ್ರತಿನಿಧಿಯಾಗಿ ಆರಿಸಿ ನಾವು ಅವರನ್ನು ಮರೆತುಬಿಡುತ್ತೇವೆ. ಮತ್ತೆ ಐದು ವರ್ಷಗಳ ನಂತರ ಚುನಾವಣೆ ಎದುರಿಸುತ್ತೇವೆ. ಆದರೆ ಸಾಮಾಜಿಕ ಪಿಡುಗುಗಳಾದ ಅಸ್ಪೃಶ್ಯತೆ, ಕೋಮುವಾದ, ಜಾತಿವಾದ, ಸಾಮಾಜಿ ಅಸಮಾನತೆ, ಹಣಬಲ, ತೋಳ್ಬಲದಂತಹ ಸಾಮಾಜಿಕ ಪಿಡುಗುಗಳು ಮುಂದುವರಿಯುತ್ತವೆ. ಇದನ್ನು ನಾವು ಪ್ರಶ್ನಿಸಬೇಕು. ಈ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.
ನಮ್ಮ ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳವಳಿ ಕೂಡಾ ಬ್ರಿಟಿಷರನ್ನು ದೇಶದಿಂದ ಹೊರ ಹಾಕುವುದು ಮಾತ್ರವಾಗಿರಲಿಲ್ಲ. ಬದಲಾಗಿ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆ, ಅಸ್ಪೃಶ್ಯತೆ, ದಬ್ಬಾಳಿಕೆ, ಅಸಮಾನತೆಯನ್ನು ಕೂಡಾ ತೊಲಗಿಸುವುದಾಗಿತ್ತು. ಆದರೆ ಸಂವಿಧಾನ ರಚನೆಯ 75 ವರ್ಷಗಳ ಬಳಿಕವೂ ಇದನ್ನೆಲ್ಲಾ ನಾವು ತೊಡೆದು ಹಾಕಿದ್ದೇವೆಂದು ಹೇಳಲು ಸಾಧ್ಯವೇ ಎಂದವರು ಪ್ರಶ್ನಿಸಿದರು.
ಸತಿಸಹಗಮನ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ, ಸೆ. 2ರಂದು ರಾಜಸ್ತಾನ, ಮಧ್ಯಪ್ರದೇಶ, ಗುಜರಾತ್‌ಗಳಲ್ಲಿ ‘ಸತಿ ಮಾತೆ’ಯರನ್ನು ಐದು ಕಿ.ಮೀ.ಗೊಂದರಂತೆ ದೇವಾಲಯಗಳನ್ನು ನಿರ್ಮಿಸಿ ಪೂಜಿಸಿ ವೈಭವೀಕರಿಸಲಾಗುತ್ತದೆ. ಹಿಂದೆಲ್ಲಾ ಬೆರಳೆಣಿಕೆಯ ಜನರು ಅಂತಹ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರೆ ಇಂದು ಆ ಸಂಖ್ಯೆ ಸಾವಿರಾರು ಸಂಖ್ಯೆಗೆ ಏರಿಕೆಯಾಗಿದೆ. ರಾಜಸ್ತಾನದ ಜೋಧ್‌ಪುರದಲ್ಲಿ ಮೋಟಾರು ಸೈಕಲೊಂದನ್ನು ವಿಜೃಂಭಿಸುವ ಕಾರ್ಯವೂ ನಡೆದಿದೆ. ಎಲ್ಲರನ್ನು ಒಳಗೊಂಡ, ಎಲ್ಲರ ಹಿತ ಕಾಯುವ ಸಾಂವಿಧಾನಿಕ ನೈತಿಕತೆಯನ್ನು ಬಲಪಡಿಸುವ ಬದಲು ಪ್ರಸಕ್ತ ಇಂತಹ ಮೌಢ್ಯಗಳನ್ನು ಸಂಪ್ರದಾಯ, ಸಂಸ್ಕೃತಿ, ಹಾಗೂ ಸಾಮಾಜಿಕ ನೈತಿಕತೆಯ ಹೆಸರು ನೀಡಿ ವಿಜೃಂಭಿಸಲಾಗುತ್ತಿದೆ. ಇವೆಲ್ಲವೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಶಬ್ಧ ಹಾಗೂ ವಾಯು ಮಾಲಿನ್ಯಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಮನವಿ ಮೇರೆಗೆ ಸುಪ್ರೀಂ ಕೋರ್ಟ್ 10 ಗಂಟೆಗೆ ಸೀಮಿತಗೊಳಿಸಿ ಆದೇಶ ನೀಡಿತ್ತು. ಆದರೆ ಸಾಮಾಜಿಕ ನೈತಿಕತೆ ನೆಲೆಯಲ್ಲಿ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ಕೂಡಾ 12 ಗಂಟೆಯವರೆಗೆ ಆದೇಶ ವಿಸ್ತರಿಸಿ, ಸ್ಥಳೀಯ ಆಡಳಿತಕ್ಕೆ ಅದರ ಜವಾಬ್ಧಾರಿಯನ್ನು ವಹಿಸಿದ ಪರಿಣಾಮ ನಾವು ಎದುರಿಸುತ್ತಿದ್ದೇವೆ. ನ್ಯಾಯಾಲಯ ಹಾಗೂ ನ್ಯಾಯಾಧೀಶರೂ ಕೂಡಾ ವ್ಯವಸ್ಥೆಯ ಭಾಗ ಆಗಿರುವ ಕಾರಣ ಅವರಿಗೂ ಕೆಲವೊಂದು ಮಿತಿಗಳಿವೆ. ಆದರೆ ಸಾರ್ವಜನಿಕ ಜೀವನದಲ್ಲಿ ಇರುವವರು ಇದರ ಬಗ್ಗೆ ಧ್ವನಿ ಎತ್ತುವ, ಸಾಂವಿಧಾನಿಕ ಮೌಲ್ಯಗಳ ಪರ ವಹಿಸುವ ಕಾರ್ಯ ಮಾಡಬೇಕೆಂದು ಅವರು ಕರೆ ನೀಡಿದರು.
ಹೊಸತು ಪತ್ರಿಕೆಯ ಸಂಪಾದಕ ಸಿದ್ಧನಗೌಡ ಪಾಟೀಲ್ ಸೇರಿದಂತೆ ಹಿರಿಯ ಸಾಹಿತಿಗಳು, ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಕಾಶಕರಾದ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, 2013ರಿಂದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾರು ಹೇಗೆ ಜೀವಿಸಬೇಕು, ಏನು ತಿನ್ನಬೇಕು, ಯಾವ ರೀತಿ ಹಬ್ಬ ಆಚರಿಸಬೇಕು ಎಂಬ ವೈಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರುವ ವ್ಯವಸ್ಥೆಯಡಿ ಸಂವಿಧಾನವೇ ಶ್ರೇಷ್ಟ ಎಂಬ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ರವೀಂದ್ರ ಕಲಾಭವನದಲ್ಲಿ ಈ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದೀಚೆಗೆ ಇದಕ್ಕೆ ಅನುಮತಿ ನೀಡುವಲ್ಲಿಯೂ ಮಂಗಳೂರು ವಿಶ್ವವಿದ್ಯಾನಿಲಯ ಹಿಂದೆ ಮುಂದೆ ನೀಡುವ ಪರಿಸ್ಥಿತಿ ಇದೆ. ಈ ಬಾರಿ ಇಲ್ಲಿ ಅನುಮತಿಗಾಗಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೆರವು ಪಡೆದು ಕುಲಪತಿಗೆ ಪತ್ರ ಬರೆದ ಬಳಿಕ ಅವಕಾಶ ದೊರಕಿದೆ ಎಂದು ಹೇಳಿದರು.














