ಮಂಗಳೂರು: ಕದ್ರಿ ರಾಷ್ಟ್ರೀಯ ಮಕ್ಕಳ ಉತ್ಸವಕ್ಕೆ ಚಾಲನೆ

ಮಂಗಳೂರು, ಸೆ.14: ನಮ್ಮ ಮಕ್ಕಳಿಗೆ ವೇದ, ಪುರಾಣ, ಉಪನಿಷತ್‌ಗಳಲ್ಲಿರುವ ಪುರಾಣದ ಪುಣ್ಯ ಪುರುಷರ ನಾಮಕರಣ ಮಾಡುವ ಮೂಲಕ ಸಂಸ್ಕೃತಿಯನ್ನು ಪರಿಚಯಿಸಿ ಸಮಾಜದಲ್ಲಿ ಉನ್ನತ ಪರಿವರ್ತನೆಗೆ ನಾಂದಿಯಾ ಗಬೇಕು ಎಂದು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ರವಿವಾರ ಆಯೋಜಿಸಿದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣವೇಷ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶ್ರೀ ಕೃಷ್ಣ ವೇಷ ಹಾಕುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕು. ಕಲ್ಕೂರ ಪ್ರತಿಷ್ಠಾನ ಸುಮಾರು 43 ವರ್ಷಗಳಿಂದ ಅವಕಾಶ ಕಲ್ಪಿಸುತ್ತಿದೆ. ರಾಮನ, ಕೃಷ್ಣನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು. ಮುಂದಿನ ವರ್ಷದಿಂದ ಕೃಷ್ಣನ ಹೆಸರು ಇರುವವರನ್ನು ಕರೆದು ಗೌರವಿಸುವ ಕೆಲಸವಾಗಬೇಕು ಎಂದು ಸ್ವಾಮೀಜಿ ನುಡಿದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ವೇದವ್ಯಾಸ ಕಾಮತ್, ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಶರವು ದೇವಳದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಭುವನಾಭಿರಾಮ ಉಡುಪ, ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್, ಲೀಲಾಕ್ಷ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







