ಮಂಗಳೂರು: ರಾಮಕೃಷ್ಣ ಮಿಷನ್ ಅಮೃತ ಭವನ ಉದ್ಘಾಟನೆ

ಮಂಗಳೂರು: ರಾಮಕೃಷ್ಣ ಮಿಷನ್ ಸಂಸ್ಥೆಯು ಮಂಗಳೂರಿನಲ್ಲಿ 75 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಗರದ ರಾಮಕೃಷ್ಣ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಅಮೃತ ಭವನದ ಉದ್ಘಾಟನೆ ರವಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಮಕೃಷ್ಣ ಮಿಷನ್‌ನ ನೂತನ ಜಾಲತಾಣವನ್ನು ಅನಾವರಣಗೊಳಿಸಿದ ಸಂಸದ ಬ್ರಿಜೇಶ್ ಚೌಟ ಮಾತನಾಡಿ ದೇಶದಲ್ಲೇ ಮಂಗಳೂರು ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಖ್ಯಾತಿಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಕನಸಿನ ಸಂಕಲ್ಪದಂತೆ ದೇಶದಲ್ಲೇ ಮಂಗಳೂರು ಸ್ವಚ್ಚ ನಗರವಾಗಿ ರೂಪುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಮಠದ ಪ್ರಯತ್ನ ಶ್ಲಾಘನೀಯ ಎಂದರು.
ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ವರ್ಷದ ಹಿನ್ನೆಲೆಯಲ್ಲಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಚಾಲನೆ ನೀಡಿದರು. ಮಂಗಳೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ನ ಸಾಕ್ಷ್ಯಚಿತ್ರವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಿಡುಗಡೆಗೊಳಿಸಿದರು.
ಮಿಷನ್‌ನಲ್ಲಿ ಸೇವೆ ಸಲ್ಲಿಸಿದ 75 ಸ್ವಯಂಸೇವಕರಿಗೆ ಹಾಗೂ ಆಶ್ರಮದ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಭಜನಾ ಮಂಡಳಿಗಳಿಗೆ ಗೌರವ ಸಲ್ಲಿಸಲಾಯಿತು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಸ್ವಾಗತಿಸಿದರು. ರಾಮಕೃಷ್ಣ ಮಿಷನ್‌ನ ಹಳೆಯ ವಿದ್ಯಾರ್ಥಿ ಸಿಎ ಶಿವಕುಮಾರ್ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.







