ಡಿವೈಎಫ್ಐ ಮುಲ್ಕಿ ಘಟಕದ ನೇತೃತ್ವದಲ್ಲಿ ರಸ್ತೆಗಳನ್ನು ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

ಮುಲ್ಕಿ: ಮುಲ್ಕಿ - ಮೂಡುಬಿದಿರೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯಾವೊಂದು ಕೊಡುಗೆ ಗಳನ್ನು ನೀಡಲು ಶಾಸಕರಿಗೆ ಸಾಧ್ಯವಾಗಿಲ್ಲ. ಒಟ್ಟಾರೆ ಮುಲ್ಕಿ ಮೂಡಬಿದ್ರೆ ಕ್ಷೇತ್ರವನ್ನು ಕಡೆಗಣಿಸುವಲ್ಲಿ ಇಲ್ಲಿನ ಶಾಸಕರೇ ನೇರ ಹೊಣೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮುಲ್ಕಿ ನಗರ ಪಂಚಾಯತ್ ಕಚೇರಿ ಮುಂಭಾಗ ಡಿವೈಎಫ್ಐ ಮುಲ್ಕಿ ಘಟಕದ ನೇತೃತ್ವದಲ್ಲಿ ಮುಲ್ಕಿಯ ಕೆಟ್ಟುಹೋಗಿರುವ ರಸ್ತೆಗಳನ್ನು ಸರಿಪಡಿಸಲು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಲ್ಕಿ- ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಯಾವೊಂದು ರಸ್ತೆಗಳನ್ನು ಸರಿಪಡಿಸುವಲ್ಲಿ ಶಾಸಕ ಉಮನಾಥ ಕೋಟ್ಯಾನ್ ರವರಿಗೆ ಈವರೆಗೂ ಸಾಧ್ಯವಾಗದಿರುವುರು ಆಡಳಿತ ವೈಫಲ್ಯಕ್ಕೆ ಹಿಡಿದಿರುವ ಕೈಗನ್ನಡಿ ಎಂದರು.
ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಶ್ ಬಜಾಲ್ ಮಾತನಾಡುತ್ತಾ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯಿಂದ ಹಿಡಿದು ರಾಜ್ಯ ಹೆದ್ದಾರಿ ಸಹಿತ ಯಾವೊಂದು ರಸ್ತೆಗಳು ಸರಿಯಾಗಿ ನಿರ್ಮಾಣಗೊಂಡಿಲ್ಲ. ಮುಲ್ಕಿ - ಮೂಡಬಿದ್ರೆ ಮುಖ್ಯ ರಸ್ತೆ, ಬೈಪಾಸ್ ರಸ್ತೆ, ಮುಲ್ಕಿ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸಲು ಇಲ್ಲಿನ ಶಾಸಕ ಉಮಾನಾಥ ಕೊಟ್ಯಾನ್ ಅವರಿಗೆ ಸಾಧ್ಯವಾಗಿಲ್ಲ. ಇದು ಈ ಮುಖ್ಯರಸ್ತೆಗೆ ಹೆಸರಿಟ್ಟ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರಾದ ಕಾರ್ನಾಡು ಸದಾಶಿವ ರಾಯರು, ಮುಲ್ಕಿ ರಾಮಕೃಷ್ಣ ಪೂಂಜರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ತಯ್ಯೂಬ್ ಬೆಂಗರೆ, ಮಕ್ಸೂದು, ಅಜ್ಮಲ್, ಶ್ರೀನಾಥ್ ಕಾಟಿಪಳ್ಳ, ರಮೇಶ್ ಮುಲ್ಕಿ, ರಿಯಾಝ್ ಕಾರ್ನಾಡ್ ,ಅಸ್ಲಾಂ , ಇಲ್ಯಾಸ್, ಸುನೀಲ್, ರಮೇಶ್ ಗೇರುಕಟ್ಟೆ, ವಸಂತ, ಚಂದ್ರಕಾಂತ್ ಪೈ, ಮುಂತಾದವರು ಉಪಸ್ಥಿತರಿದ್ದರು. ಡಿವೈಎಫ್ಐ ಮುಲ್ಕಿ ಘಟಕದ ಮುಖಂಡ ಸಾಧಿಕ್ ಕಿಲ್ಪಾಡಿ ಸ್ವಾಗತಿಸಿ ನಿರೂಪಿಸಿದರು.







