ಯುನಿವೆಫ್ ಕರ್ನಾಟಕ-ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಉದ್ಘಾಟನೆ

ಮಂಗಳೂರು, ಸೆ.20: ಯುನಿವೆಫ್ ಕರ್ನಾಟಕ ಸೆ.19ರಿಂದ 2026ರ ಜನವರಿ 2ರವರೆಗೆ ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಉದ್ಘಾಟನಾ ಕಾರ್ಯ ಕ್ರಮ ಶುಕ್ರವಾರ ನಗರದ ಕಂಕನಾಡಿ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಿತು.
ಕುದ್ರೋಳಿಯ ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಝುಬೈರ್ ಅಹ್ಮದ್ ನದ್ವಿ ಅಭಿಯಾನ ಉದ್ಘಾಟಿಸಿ ಮಾತಮಾಡಿದರು. ಬಳಿಕ ಮಾತನಾಡಿದ ಅವರು ಪ್ರವಾದಿ ಪ್ರೇಮವು ಇಸ್ಲಾಮಿನ ಮೂಲಭೂತ ಅಗತ್ಯವಾಗಿದೆ. ತನ್ನ ತಂದೆ ತಾಯಿ, ಸಂತಾನ, ಬಂಧು ಬಳಗವು ಪ್ರವಾದಿಗಿಂತ ಆಪ್ತರು ಎಂದು ಓರ್ವ ಮುಸ್ಲಿಮ್ ಭಾವಿಸಿದರೆ ಆತ ನೈಜ ಮುಸ್ಲಿಮನಾಗುವುದಿಲ್ಲ. ಆದರೆ ಪ್ರವಾದಿ ಪ್ರೇಮ ಎಂಬುದು ಒಂದು ಕಾಟಾಚಾರಕ್ಕೆ ಸೀಮಿತವಾಗಬಾರದು. ಜೀವನದ ಎಲ್ಲಾ ಹಂತಗಳಲ್ಲೂ ಅವರ ಅನುಸರಣೆಯೇ ನಮ್ಮ ಮೋಕ್ಷದ ಹಾದಿಯಾಗಿದೆ. ಯುನಿವೆಫ್ ಕರ್ನಾಟಕದ ಈ ಅಭಿಯಾನ ಜನಮಾನಸದಲ್ಲಿ ಪ್ರವಾದಿ ಪ್ರೇಮದ ಬೆಳಕನ್ನು ಹರಿಸಲಿ ಎಂದು ಹಾರೈಸಿದರು.
ಮುಖ್ಯ ಭಾಷಣಗೈದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಲೌಕಿಕ ಲಾಭಕ್ಕಾಗಿ ಪ್ರವಾದಿ ಬೋಧನೆಗಳನ್ನು ಧಿಕ್ಕರಿಸುವವರು ಪ್ರವಾದಿಯ ನೈಜ ಅನುಯಾಯಿಗಳಾಗಲಾರರು. ಪ್ರವಾದಿ ಪ್ರೇಮವು ಬದುಕಿಗೆ ದಾರಿದೀಪವಾಗಿ ರಬೇಕು. ಮುಸ್ಲಿಮ್ ಸಮುದಾಯ ತನ್ನ ಅಸ್ತಿತ್ವಕ್ಕಾಗಿಯೇ ಹೋರಾಡುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಎಲ್ಲಾ ಅಡೆ ತಡೆಗಳನ್ನು ದಾಟಿ, ಪ್ರವಾದಿ (ಸ)ಯ ಸಂದೇಶ ಪ್ರಚಾರದ ಮಹತ್ತರ ಗುರಿಯೊಂದಿಗೆ ನಿರಂತರ 20 ವರ್ಷಗಳ ಕಾಲ ಒಂದು ಅಭಿಯಾನವನ್ನು ಮುನ್ನಡೆಸಿಕೊಂಡು ಬರುವುದು ಸಾಮಾನ್ಯ ವಿಷಯವಲ್ಲ. ಇಲ್ಲಿನ ಮುಸ್ಲಿಮೇತರ ರಲ್ಲಿರುವ ಅಪಕಲ್ಪನೆಗಳನ್ನು ದೂರೀಕರಿಸುವ ನಿಟ್ಟಿನಲ್ಲಿ ಯುನಿವೆಫ್ ಕರ್ನಾಟಕ ನಿರಂತರ ಪರಿಶ್ರಮಿಸುತ್ತಿದೆ. ಹೊತ್ತಿ ಉರಿಯುತ್ತಿರುವ ಅಗ್ನಿಕುಂಡವನ್ನು ಆರಿಸಲು ಗುಬ್ಬಚ್ಚಿ ಕೊಕ್ಕಿನಲ್ಲಿ ನೀರೆರೆದ ಹಾಗೆ ನಮ್ಮದೂ ಒಂದು ಅಳಿಲು ಸೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ್ ಉಪಸ್ಥಿತರಿದ್ದರು. ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ಮುಹಮ್ಮದ್ ಆಸಿಫ್ ವಂದಿಸಿದರು.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಫಳ್ನೀರ್ ಲುಲು ಸೆಂಟರ್‌ನಿಂದ ಕಂಕನಾಡಿ ಜಮೀಅತುಲ್ ಫಲಾಹ್ ಹಾಲ್‌ವರೆಗೆ ಕಾಲ್ನಡಿಗೆ ಜಾಥಾ ಜರುಗಿತು.







