ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸಕ್ರಿಯವಾಗಿ ಪಾಲ್ಗೊಳ್ಳಲು ಬ್ಯಾರಿ ಸಾಹಿತ್ಯ ಅಕಾಡಮಿ ಮನವಿ
ಮಂಗಳೂರು: ಒಂದು ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ವೈಜ್ಞಾನಿಕ ಸಮೀಕ್ಷೆಯ ಮೂಲಕ ಅರಿತರೆ ಮಾತ್ರ ಸರಕಾರಕ್ಕೆ ಆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲು ಸಾಧ್ಯ. ಆದ್ದರಿಂದ, ಸೆ.22ರಿಂದ ಅಕ್ಟೋಬರ್ 7ರ ತನಕ ರಾಜ್ಯ ಸರಕಾರದ ಅಧೀನದಲ್ಲಿರುವ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಮಹತ್ವ ದ್ದಾಗಿದೆ. ಬ್ಯಾರಿ ಸಮುದಾಯವು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಮನವಿ ಮಾಡಿದ್ದಾರೆ.
ಪ್ರತಿಯೊಂದು ಕುಟುಂಬದವರು ತಮ್ಮ ಪಡಿತರ ಚೀಟಿ, ಕುಟುಂಬದ ಆರು ವರ್ಷಕ್ಕಿಂತ ಹೆಚ್ಚು ಪ್ರಾಯದ ಎಲ್ಲರ ಆಧಾರ್ ಕಾರ್ಡ್ (ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಮೊಬೈಲ್‌ಗೆ ಓಟಿಪಿ ಬರುವುದರಿಂದ ಮೊಬೈಲ್ ಕೂಡ ಜೊತೆಗಿರಲಿ), ವಯಸ್ಸು 18 ಮೀರಿರುವ ಎಲ್ಲರ ಮತದಾರರ ಗುರುತಿನ ಚೀಟಿ ಹಾಗೂ ಮತ್ತಿತರ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಗಣತಿಗೆ ಬರುವ ಸರಕಾರಿ ನೌಕರರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಮೀಕ್ಷೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು. ಈ ಸಮೀಕ್ಷೆಯ ಪ್ರಶ್ನಾವಳಿ ಯಲ್ಲಿ 60 ಪ್ರಶ್ನೆಗಳಿದೆ. ಆ ಪೈಕಿ ಅನೇಕ ಪ್ರಶ್ನೆಗಳು ಹೆಚ್ಚಿನವರಿಗೆ ಅನ್ವಯಿಸುವುದಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರಿ ಸಬೇಕಾಗಿಲ್ಲ ಅಥವಾ ’ಗೊತ್ತಿಲ್ಲ’ ಎಂದೂ ಉತ್ತರಿಸಬಹುದು. ಪ್ರಶ್ನಾವಳಿಯ 8ನೇ ಕಾಲಂನಲ್ಲಿ ಧರ್ಮ ’ಇಸ್ಲಾಮ್, 9ನೇ ಕಾಲಂನಲ್ಲಿ ಜಾತಿ ’ಮುಸ್ಲಿಮ್’ 10ನೇ ಕಾಲಂನಲ್ಲಿ ಉಪಜಾತಿ ’ಬ್ಯಾರಿ ಮುಸ್ಲಿಮ್’ ಎಂಬುದಾಗಿ ಬರೆಸಬೇಕು. ಅದೇ ರೀತಿ ಪ್ರಶ್ನಾವಳಿಯ 15ನೇ ಕಾಲಂ ಮಾತೃಭಾಷೆ ಪ್ರಶ್ನೆಗೆ ಬ್ಯಾರಿ ಸಮುದಾಯದ ಎಲ್ಲರೂ ’ಬ್ಯಾರಿ’ ಎಂದು ಬರೆಸಬೇಕೆಂದು ಸಮುದಾಯದ ನಾಯಕರು ಈಗಾಗಲೆ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಹಾಗಾಗಿ ಅದನ್ನು ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.







