ಭಾರತ ಭಾಷೆಗಳ ರಂಗೋಲಿ: ಪುರುಷೋತ್ತಮ ಬಿಳಿಮಲೆ

ಮಂಗಳೂರು: ಹಲವು ಭಾಷೆಗಳ ಸಂಗಮವಾಗಿರುವ ಭಾರತವನ್ನು ಭಾಷೆಗಳ ರಂಗೋಲಿ ಎಂದರೂ ತಪ್ಪಾಗಲಾ ರದು. ಆದರೂ ಭಾರತದಲ್ಲಿ ಕೆಲವು ಭಾಷೆಗಳು ನಶಿಸಿ ಹೋಗುತ್ತಿವೆ. ಅದಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿವೆ. ಇಂತಹ ಬಹುಭಾಷಾ ಗೋಷ್ಠಿಗಳಿಂದ ಭಾಷೆಗಳು ನಶಿಸಿ ಹೋಗದಂತೆ ತಡೆಯಲು ಸಾಧ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಮಂಗಳೂರು ದಸರಾ ಪ್ರಯುಕ್ತ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದಲ್ಲಿ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳವಾರ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವ್ಯಕ್ಕೆ ತನ್ನದೇ ಆದ ಸ್ಪರ್ಶವಿದೆ. ಸಾಮಾನ್ಯ ಭಾಷೆಯಲ್ಲಿ ಬರೆದರೆ ಅದು ಕಾವ್ಯವಾಗದು. ಗದ್ಯವನ್ನು ಒಡೆದು ಕಾವ್ಯ ಕಟ್ಟುವ ಪ್ರಯತ್ನವನ್ನು ಕವಿಗಳು ಮಾಡಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.
ಮನೋಜ್ ಕುಮಾರ್ ಶಿಬಾರ್ಲ (ಕನ್ನಡ), ಗೀತಾ ಲಕ್ಷ್ಮೀಶ ಶೆಟ್ಟಿ (ತುಳು) ಜೊಸ್ಸಿಪಿಂಟೋ ಕಿನ್ನಿಗೋಳಿ ಮತ್ತು ವೆಂಕಟೇಶ್ ನಾಯಕ್ (ಕೊಂಕಣಿ), ಹಂಝ ಮಲಾರ್ (ಬ್ಯಾರಿ), ಬಿ.ಮುರಾರಿ ತಂತ್ರಿ (ಸಂಸ್ಕೃತ), ವಿನೋದ್ ಮೂಡಗದ್ದೆ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಡಾ. ಅಣ್ಣಯ್ಯ ಕುಲಾಲ (ಕುಂದಗನ್ನಡ), ಕವಿತಾ ಅಡೂರು (ಶಿವಳ್ಳಿ ತುಳು), ಡಾ. ಸುರೇಶ್ ನೆಗಳಗುಳಿ (ಹವ್ಯಕ) ಕವನಗಳನ್ನು ವಾಚಿಸಿದರು.
ವೇದಿಕೆಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಉಪಸ್ಥಿತರಿದ್ದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.







