ಆನ್‌ಲೈನ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿ :ನ್ಯಾಯಾಧೀಶೆ ಜೈಬುನ್ನಿಸಾ

ಮಂಗಳೂರು: ದಿನನಿತ್ಯದ ಬದುಕಿನಲ್ಲಿ ಬಹುತೇಕ ಕೆಲಸಗಳಿಗೆ ಆನ್‌ಲೈನ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ತುಂಬಾ ಮಂದಿ ಮೋಸ ಹೋಗುತ್ತಿದ್ದಾರೆ. ಆನ್‌ಲೈನ್ ಬಳಕೆ ಬಗ್ಗೆ ಸರಿಯಾದ ಮಾಹಿತಿ ಮುಖ್ಯವಾಗಿದೆ. ಅಲ್ಲದೆ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಶರಾದ ಜೈಬುನ್ನಿಸಾ ಹೇಳಿದರು.
ರತಿ ಫೌಂಡೇಶನ್, ಒಆರ್‌ಇಎಸ್‌ಪಿ, ಪಡಿ ಮಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಹೊಟೇಲ್ ಓಶಿಯನ್ ಪರ್ಲ್‌ನಲ್ಲಿ ಬುಧವಾರ ನಡೆದ ಆನ್‌ಲೈನ್ ಸುರಕ್ಷತೆ ಮತ್ತು ಪ್ರತಿತಂತ್ರಗಳ ಕುರಿತು ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಂಚೂಣಿ ಆರೋಗ್ಯ ಹಾಗೂ ಸಾಮಾಜಿಕ ಆರೈಕೆ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಸೇಫ್ಟಿಗಾಗಿ ಥಿಂಕ್ ಫಸ್ಟ್, ಕ್ಲಿಕ್ ಲೇಟರ್ ಎಂಬ ನಿಯಮವನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು. ಅತಿಯಾದ ಆನ್‌ಲೈನ್ ಬಳಕೆಯಿಂದ ಮಕ್ಕಳು ನಾನಾ ಅಪಾಯಗಳಿಗೆ ತುತ್ತಾಗುತ್ತಿದ್ದಾರೆ. ತಂತ್ರಜ್ಞಾನಗಳು ಅವಕಾಶಗಳನ್ನು ಹಿಗ್ಗಿಸಿದಷ್ಟು ಸವಾಲುಗಳನ್ನು ತಂದೊಡ್ಡಿವೆ. ಮಕ್ಕಳ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಆರೋಗ್ಯದ ಮೇಲೂ ವಿಪರೀತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಹೆತ್ತವರು ಜಾಗ್ರತೆ ವಹಿಸಬೇಕು ಎಂದು ನ್ಯಾಯಾಧೀಶೆ ಜೈಬುನ್ನಿಸಾ ಕರೆ ನೀಡಿದರು.
ರತಿ ಫೌಂಡೇಶನ್‌ನ ಡಿಜಿಟಲ್ ಸುರಕ್ಷತೆ ಸಂಶೋಧನೆ ಮತ್ತು ವಕಾಲತ್ತು ವಿಭಾಗದ ಮುಖ್ಯಸ್ಥ ಸಿದ್ಧಾರ್ತ್ ಪಿ. ಅಧ್ಯಕ್ಷತೆ ವಹಿಸಿದ್ದರು. ಸಿಸಿಆರ್‌ಬಿ ಎಸಿಪಿ ಗೀತಾ ಕುಲಕರ್ಣಿ, ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ., ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ ಮಾತನಾಡಿದರು.
ಒಆರ್‌ಇಎಸ್‌ಪಿ ಸ್ಥಾಪಕ ಡಾ.ಕೀರ್ತಿ ನಕ್ರೆ ಸ್ವಾಗತಿಸಿದರು. ಡಾ.ಸ್ಮಿತಾ ಮತ್ತು ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು. ಪಡಿ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ ವಂದಿಸಿದರು.
14 ಸಾವಿರ ಮಕ್ಕಳು ನಾಪತ್ತೆ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ರಾಂತಿ ಮಾಡಿದಂತೆ ಸವಾಲುಗಳನ್ನೂ ಕೂಡ ತಂದೊಡ್ಡಿದೆ. ಮೊಬೈಲ್ ಬಳಕೆಯಿಂದ ಹಣಕಾಸು ವಂಚನೆ, ಲೈಂಗಿಕ ದೌರ್ಜನ್ಯ, ಮಕ್ಕಳ ಶೋಷಣೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 26,463 ಮಂದಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭ ಧರಿಸಿದ್ದಾರೆ. ಐದು ವರ್ಷದಲ್ಲಿ 14 ಸಾವಿರ ಮಕ್ಕಳು ನಾಪತ್ತೆಯಾಗಿದ್ದಾರೆ. ಅದರಲ್ಲಿ 13 ಸಾವಿರ ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೊಕ್ಸೊ ಪ್ರಕರಣಗಳ ಜೊತೆಗೆ ಶೇ.42ರಷ್ಟು ಮಕ್ಕಳಲ್ಲಿ ದೃಷ್ಟಿ ದೋಷ, ಬೆನ್ನು, ಕತ್ತು ನೋವು ಸಮಸ್ಯೆ ಉಂಟಾಗಿದೆ ಎಂದರು.







