ಪ್ರವಾದಿ ಸಾರ್ವತ್ರಿಕ ಸಂದೇಶ ಎಲ್ಲಡೆ ಹರಡಬೇಕಾಗಿದೆ: ಅಬ್ದುಲ್ ರಶೀದ್ ಝೈನಿ

ಮಂಗಳೂರು: ‘ಸಾವಿರದ ಐನೂರು ವರ್ಷ ಕಳೆದರೂ ಪ್ರವಾದಿ ಮುಹಮ್ಮದ್(ಸ) ಅವರ ಆಶಯಗಳಿಗೆ ಚ್ಯುತಿ ಬಂದಿಲ್ಲ. ಯಾವುದೇ ಕಳಂಕ ತಟ್ಟಿಲ್ಲ. ಮಹತ್ವವನ್ನು ಕಳೆದುಕೊಂಡಿಲ್ಲ. ಪ್ರವಾದಿ ಸಾರ್ವತ್ರಿಕ ಸಂದೇಶ ಎಲ್ಲಡೆ ಹರಡಬೇಕಾಗಿದೆ ಎಂದು ಪ್ರಖ್ಯಾತ ವಿದ್ವಾಂಸ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಅಭಿಪ್ರಾಯಪಟ್ಟಿದ್ದಾರೆ.
ತಖ್ವಾ ಅಕಾಡೆಮಿ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಇದರ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಬುಧವಾರ ನಡೆದ ಮೀಲಾದ್ ಫೆಸ್ಟ್-2025 ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂದೇಶ ನೀಡಿದರು.
ಮಕ್ಕಳಿಗೆ ಚಿಕ್ಕಂದಿನಲ್ಲೇ ಪ್ರವಾದಿಯ ಪ್ರೇಮ, ಆದರ್ಶಗಳನ್ನು ಕಲಿಸಬೇಕು. ಅವರಲ್ಲಿ ಆ ನಿಟ್ಟಿನಲ್ಲಿ ಜಾಗೃತಿ ಮೂಡಿ ಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಹೆತ್ತವರು ಶ್ರಮಿಸಬೇಕು ಎಂದರು.
ಮಿಲಾದ್ ಫೆಸ್ಟ್‌ನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಅವರು ಮಾತನಾಡಿ ಪ್ರವಾದಿಯವರ ವ್ಯಕ್ತಿತ್ವ ಸ್ವಭಾವ ಅವರ್ಣನೀಯ, ಪ್ರವಾದಿಯವರ ಸ್ವಭಾವವನ್ನು ಬಣ್ಣಿಸಲು ಯಾರಿಗೂ ಸಾಧ್ಯವಿಲ್ಲ. ಜಗತ್ತಿನಲ್ಲಿ ಎಲ್ಲಡೆ ಪ್ರವಾದಿಯ ಜನ್ಮ ದಿನಾಚರಣೆ ನಡೆಯುತ್ತಿದೆ. ಮಕ್ಕಳಿಗೆ ಪ್ರವಾದಿಯ ಆದರ್ಶ, ಸಂದೇಶವನ್ನು ತಿಳಿಸುವ ನಿಟ್ಟಿನಲ್ಲಿ ತಖ್ವಾ ಅಕಾಡೆಮಿ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಯೆನೆಪೋಯ ವಿವಿಯ ಕುಲಪತಿ ಡಾ. ವೈ.ಅಬ್ದುಲ್ ಕುಂಞಿ ಹಾಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇಂಡಿಯಾನಾ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಇಂಟವೇನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಯೂಸುಫ್ ಕುಂಬ್ಳೆ ಮುಖ್ಯ ಅತಿಥಿಯಾಗಿದ್ದರು.
ಪ್ರಮುಖರಾದ ಹೈದರ್ ಪರ್ತಿಪ್ಪಾಡಿ, ಶೌಕತ್ ಅಲಿ ಎಂ, ಬಿ.ಎ ನಝೀರ್‌ಕೃಷ್ಣಾಪುರ, ಬಶೀರ್ ಅಹ್ಮದ್ ಮಂಗಳೂರು, ಶಕೀರ್ ಹಾಜಿ ಹೈಸಂ, ತಖ್ವಾ ಮಸೀದಿ ಇಮಾಮ್ ಮುಹಮ್ಮದ್ ಸಖಾಫಿ , ಹಿಫುಳ್ ಕಾಲೇಜಿನ ಪ್ರಾಂಶುಪಾಲ ಹಾಫಿಳ್ ಸಲ್ಮಾನ್, ಮುದರ್ರಿಸ್ ಸದರ್ ಮುಲ್ಲಿಂ ಹಾಫಿಳ್ ಸುಹೈಲ್ ಹಾಶಿಮಿ ಉಪಸ್ಥಿತರಿದ್ದರು.
ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಹಸನ್ ಬಾವ ವಂದಿಸಿದರು. ವಿವಿಧ ಕಲಾ ಕಾರ್ಯಕ್ರಮಗಳು ನಡೆದವು.







