ದ.ಕ.ಜಿಲ್ಲೆಯಲ್ಲಿ ಮೂರನೇ ದಿನವೂ ಸಮೀಕ್ಷೆಗೆ ಸಿಗದ ಸೂಕ್ತ ಸ್ಪಂದನ

ಮಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ದ.ಕ.ಜಿಲ್ಲೆಯಲ್ಲಿ ಮೂರನೇ ದಿನವೂ ಸೂಕ್ತ ಸ್ಪಂದನ ಸಿಕ್ಕಿಲ್ಲ. ತಾಂತ್ರಿಕ ದೋಷ ಸಹಿತ ಮತ್ತಿತರ ಸಮಸ್ಯೆಗಳಿಂದಾಗಿ ಬುಧವಾರವೂ ನಿಗದಿತ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಗಣತಿಕಾರ್ಯ ಆರಂಭವಾಗಿತ್ತು. ಬುಧವಾರ ಮಂಗಳೂರು ದಕ್ಷಿಣ ಮತ್ತು ಉತ್ತರ ವಲಯದಲ್ಲೂ ಕಾರ್ಯ ಶುರುವಾಗಿದೆ. ಆದರೆ ಸರ್ವರ್ ಸಮಸ್ಯೆ, ಜಿಯೋ ಟ್ಯಾಗ್ ಹಾಗೂ ಆ್ಯಪ್ ಸಮಸ್ಯೆಯು ಬುಧವಾರವೂ ಬಾಧಿಸಿದೆ.
ಶಿಕ್ಷಣ ಇಲಾಖೆಯಲ್ಲದೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಪಂಚಾಯತ್‌ರಾಜ್ ಇಲಾಖೆ ಸಹಿತ ಬಹುತೇಕ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅತಿಥಿ ಶಿಕ್ಷಕರು ಹಾಗೂ ಅಂಗನವಾಡಿ ಕೇಂದ್ರ ದಲ್ಲಿರುವ ಕಾರ್ಯಕರ್ತೆಯರ ಪೈಕಿ ಪದವಿ ಪೂರ್ಣಗೊಳಿಸಿದವರಿಂದಲೂ ಗಣತಿಕಾರ್ಯ ನಡೆಸಲಾಗುತ್ತಿದೆ.
ಬುಧವಾರ ಗಣತಿ ಕಾರ್ಯಕ್ಕೆ ಸ್ವಲ್ಪ ವೇಗ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ಬಿರುಸುಪಡೆಯಲಿದೆ. ಈವರೆಗೆ ಜಿಲ್ಲೆಯಲ್ಲಿ ಅಂದಾಜು 2 ಸಾವಿರದಷ್ಟು ಮಂದಿಯ ಗಣತಿ ನಡೆದಿದೆ ಎಂದು ದ.ಕ. ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾಹಿತಿ ನೀಡಿದ್ದಾರೆ.
*ಗಣತಿಗೆ ಸಂಬಂಧಿಸಿದಂತೆ ತಲೆದೋರಿದ ವಿವಿಧ ಸಮಸ್ಯೆ ಸವಾಲುಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕದ ವತಿಯಿಂದ ದ.ಕ. ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಗಿದೆ. ತೀವ್ರ ಅನಾರೋಗ್ಯ ಇರುವ ಶಿಕ್ಷಕರನ್ನು, ಕ್ಯಾನ್ಸರ್ ಪೀಡಿತ ಶಿಕ್ಷಕಿಯರನ್ನು, ಗರ್ಭಿಣಿಯರು, ಬಾಣಂತಿಯರನ್ನು ಗಣತಿ ಕಾರ್ಯಕ್ಕೆ ನೇಮಿಸಿದ್ದಲ್ಲಿ ಅಂತಹ ಶಿಕ್ಷಕರನ್ನು ಗಣತಿ ಕಾರ್ಯದಿಂದ ತಕ್ಷಣ ಕೈಬಿಡುವಂತೆ ಸಂಘ ಮನವಿ ಮಾಡಿದೆ.







