ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆಯ ಜಾಣ್ಮೆ ನಮ್ಮದಾಗಬೇಕು: ಕೆ.ರಾಜು ಮೊಗವೀರ

ಕೊಣಾಜೆ: ಇಂದು ಆಧುನಿಕತೆಯ ಜೊತೆಗೆ ನಾವು ಬೆರೆತುಕೊಂಡಿದ್ದೇವೆ. ಕೃತಕ ಬುದ್ದಿಮತ್ತೆಯಂತಹ ತಂತ್ರಜ್ಞಾನ ಗಳು ಈ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಅನೇಕ ಅನುಕೂಲತೆ, ಅವಕಾಶಗಳನ್ನು ಸೃಷ್ಟಿಸುತ್ತಿವೆ ಜೊತೆಗೆ ಇದರಿಂದಾಗಿ ಅನೇಕ ಸವಾಲುಗಳೂ ಎದುರಾಗುತ್ತಿವೆ. ಸುಸ್ಥಿರವಾದ ಭವಿಷ್ಯ, ಅಭಿವೃದ್ಧಿಯ ಹಾದಿಯಲ್ಲಿ ನೂತನ ತಂತ್ರಜ್ಞಾನಗಳ ಬಳಕೆಯ ಜಾಣ್ಮೆಯನ್ನು ನಾವು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ಅವರು ಹೇಳಿದರು.
ಅವರು ಪಿ.ಎ. ಪ್ರಥಮ ದರ್ಜೆ ಕಾಲೇಜು, ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ ಹಾಗೂ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಇದರ ವತಿಯಿಂದ ಪಿ.ಎ.ಕಾಲೇಜಿನಲ್ಲಿ ಶನಿವಾರ ನಡೆದ "ಕನ್ವರ್ಜೆನ್ಸ್ 2025" 'ಸುಸ್ಥಿರ ಭವಿಷ್ಯಕ್ಕಾಗಿ ಕೃತಕ ಬುದ್ಧಿಮತ್ತೆ'ಯ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೃತಕ ಬುದ್ದಿಮತ್ತೆಯ ದಾಪುಗಾಲಿರಿಸಿದ್ದು, ನಮ್ಮ ಯೋಜನೆ, ಯೋಚನೆಯನ್ನು ಬದಲಾಯಿಸಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು, ಯುವ ಸಮುದಾಯದ ಪಾತ್ರ ಮಹತ್ತರವಾಗಿದ್ದು ನೂತನ ತಂತ್ರಜ್ಞಾನಗಳೊಂದಿಗೆ ಮಾನವೀಯ ಮೌಲ್ಯಗಳು, ಸಾಮಾಜಿಕ ಜವಬ್ಧಾರಿಗಳನ್ಜು ಅರಿತುಕೊಂಡು ಮುನ್ನಡೆಯಿರಿ ಎಂದರು.
ಸೈಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವರಾದ ಡಾ.ಆಲ್ವಿನ್ ಡೇಸಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸುಸ್ಥಿರ ಅಭಿವೃದ್ದಿಯೊಂದಿಗೆ ಉತ್ತಮ ಜಗತ್ತು ನಿರ್ಮಾಣದಲ್ಲಿ ಕೃತಕ ಬುದ್ದಿಮತ್ತೆಯ ಪಾತ್ರ ಮಹತ್ತರವಾದುದು. ಸಹಭಾಗಿತ್ವ, ಕೌಶಲ, ಸಂಪರ್ಕಗಳು ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಹಾಸಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಎ.ಎಜ್ಯುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್, ಮಂಗಳೂರು ವಿವಿ ಎಂಕಾಂ ವಿಭಾಗದ ಅಧ್ಯಕ್ಷರಾದ ಡಾ.ಪ್ರೀತಿ ಕೀರ್ತಿ ಡಿಸೋಜ, ಪಿ.ಎ.ಎಜಿಎಂ ಶರ್ಫುದ್ದೀನ್, ಅಂತರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಪೊರೇಷನ್ ನ ಪ್ರಾಂತೀಯ ಮ್ಯಾನೇಜರ್ ನಂದಾದೇವಿ,ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ ನ ಡಾ.ಸಯ್ಯದ್ ಅಹ್ಮದ್ ಅಮೀನ್ ಪಿ.ಎ.ಇ.ಟಿ ಪರ್ಚೇಸ್ ಮ್ಯಾನೇಜರ್ ಹಾರಿಸ್ ಟಿ.ಡಿ,ಸಂಯೋಜಕರಾದ ಮಹಮ್ಮದ್ ಆರೀಫ್, ಐಕ್ಯೂಎಸಿ ಸಂಯೋಜಕಿ ವಾಣಿಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಯುಎಇ ವೆಸ್ಟ್ ಪೋರ್ಡ್ ನ ಅಸೋಸಿಯೇಟ್ ಡೀನ್ ಡಾ.ಸೂಫಿ ಅನ್ವರ್, ಬಹರೈನ್ ಕಿಂಗ್ಡಮ್ ವಿವಿಯ ಪ್ರಾಧ್ಯಾಪಕ ಇಕ್ಬಾಲ್ ತೋನ್ಸೆ ಅಂತರಾಷ್ಟ್ರೀಯ ಸಮ್ಮೇಳನದ ಮುಖ್ಯ ಆಶಯಗಳನ್ನು ವಿವರಿಸಿದರು.
ಡಾ.ಜಿ.ಹರಿಕೃಷ್ಣನ್ ಸ್ವಾಗತಿಸಿದರು. ಡಾ.ರೋಶನ್ ಡಿಸೋಜ ವಂದಿಸಿದರು. ಲವಿನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







