ಯುನಿವೆಫ್-ಶಿಕ್ಷಕರ ಮತ್ತು ನ್ಯಾಯವಾದಿಗಳ ಸ್ನೇಹ ಮಿಲನ

ಮಂಗಳೂರು, ಸೆ.27: ಯುನಿವೆಫ್ ಕರ್ನಾಟಕ ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಪ್ರಯುಕ್ತ ಶಿಕ್ಷಕರ ಮತ್ತು ನ್ಯಾಯವಾದಿಗಳ ಸ್ನೇಹ ಮಿಲನ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ದಿಕ್ಸೂಚಿ ಭಾಷಣಗೈದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಸ್ಲಿಂ ಸಮುದಾಯವು ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪ್ರಸಕ್ತ ಪರಿಸ್ಥಿತಿಯಲ್ಲಿ ಸಮುದಾಯದ ಎರಡು ಸುಶಿಕ್ಷಿತ ವಿಭಾಗಗಳು ಈ ಪರಿಸ್ಥಿತಿಯ ಸುಧಾರಣೆಗೆ ಯಾವ ರೀತಿಯಲ್ಲಿ ಸ್ಪಂದಿಸಬಹುದು ಹಾಗೂ ಸಮುದಾಯದ ಹೊಣೆಗಾರಿಕೆಗಳೇನು ಎಂಬುದರ ಕುರಿತು ಚಿಂತನೆ ನಡೆಸುವ ಅಗತ್ಯ ಇದೆ. ಹಲವು ಸಮಸ್ಯೆಗಳಿಗೆ ತುತ್ತಾಗಿರುವ ಸಮುದಾಯಕ್ಕೆ ಅದಕ್ಕೆ ಅರ್ಹವಾದ ಘನತೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕಾರ್ಯಾಚರಿಸಬಹುದು ಎನ್ನುತ್ತಾ ಚರ್ಚೆಯನ್ನು ಆರಂಭಿಸಿದರು.
ಪ್ರವಾದಿ (ಸ) ರವರ ಮೇಲಿರುವ ಆಕ್ಷೇಪಣೆಗಳು ಮತ್ತು ಪರಿಹಾರ ಸೂತ್ರ ಎಂಬ ವಿಷಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮುಹಮ್ಮದ್ ಹನೀಫ್ ಯು, ಬದ್ರಿಯಾ ಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾದ ಹಂಝ ಯು.ಎನ್. ಮತ್ತು ಯೂಸುಫ್ ಡಿ. ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಹೈದರ್ ಬಂಟ್ವಾಳ್, ನೂರುದ್ದೀನ್ ಸಾಲ್ಮರ, ಶಾಹುಲ್ ಹಮೀದ್, ಶಾಝಿಯಾ, ಮುಹಮ್ಮದ್ ಹಯ್ಯಾನ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಫಹೀಮುದ್ದೀನ್ ಕಿರಾಅತ್ ಪಠಿಸಿದರು. ಅಭಿಯಾನದ ಸಂಚಾಲಕ ಯು.ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ಉಬೈದುಲ್ಲಾ ಬಂಟ್ವಾಳ್ ವಂದಿಸಿದರು.







