ಇಸ್ಮಾಈಲ್ ಸಅದಿ ಮಾಚಾರ್ ರಿಗೆ 'ಸುನ್ನೀ ಸಾಹಿತ್ಯ ಪ್ರಶಸ್ತಿ'

ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ವತಿಯಿಂದ ಎರಡು ವರ್ಷಕ್ಕೊಮ್ಮೆ ಕೊಡ ಮಾಡುವ 'ಸುನ್ನಿ ಸಾಹಿತ್ಯ ಪ್ರಶಸ್ತಿ'ಗೆ ಖ್ಯಾತ ಲೇಖಕ, ಅನುವಾದಕ, ಯುವ ವಿದ್ವಾಂಸ ಇಸ್ಮಾಈಲ್ ಸಅದಿ ಮಾಚಾರ್ ಭಾಜನರಾಗಿದ್ದಾರೆ.
ಸೆ.26 ರಿಂದ 28 ರವರೆಗೆ ಉಪ್ಪಿನಂಗಡಿಯ ತುರ್ಕಳಿಕೆಯಲ್ಲಿ ನಡೆದ ರಾಜ್ಯ ಮಟ್ಟದ 'ಸಾಹಿತ್ಯೋತ್ಸವ' ವೇದಿಕೆಯಲ್ಲಿ ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದ್ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಕ ಜಿಲ್ಲೆಯ ಬೆಳ್ತಂಗಡಿ, ಬೆಳಾಲು ಗ್ರಾಮದಲ್ಲಿ ಇಬ್ರಾಹಿಂ ಹಾಗೂ ಅವ್ವಮ್ಮ ದಂಪತಿಯ ಪುತ್ರ ಇಸ್ಮಾಈಲ್ ಸಅದಿ ಮಾಚಾರ್ ಸುನ್ನಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡದಲ್ಲಿ 50ಕ್ಕೂ ಅಧಿಕ ಕೃತಿಗಳನ್ನು ಬರೆದಿರುವ ಅವರು, ಪ್ರಸಿದ್ಧ ಕರ್ಮಶಾಸ್ತ್ರ ಗ್ರಂಥ ಫತ್ಹುಲ್ ಮುಈನ್, ವಿಶ್ವಪ್ರಸಿದ್ಧ ಅರಬಿಕ್ ಮಹಾಕಾವ್ಯ ಖಸೀದತುಲ್ ಬುರ್ದಾ ಮುಂತಾದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಇಫಾದ ಹದೀಸ್ ತರಗತಿ ಮೂಲಕ ಮನೆಮಾತಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ತನ್ನ ಮೊಟ್ಟ ಮೊದಲ ಬರಹವನ್ನು ಅಂದಿನ ಎಸ್ಸೆಸ್ಸೆಫ್ ಮುಖವಾಣಿ ಯಾಗಿದ್ದ ಹೂದೋಟ ಪತ್ರಿಕೆ ಪ್ರಕಟಿಸಿದ್ದನ್ನು ನೆನಪಿಸಿದರು, 'ಪ್ರಶಸ್ತಿಗಳು ನಮ್ಮ ಕರ್ತವ್ಯ ಪ್ರಜ್ಞೆಯನ್ನು ಬಡಿದೆಬ್ಬಿ ಸುತ್ತದೆ, ಅರ್ಹನಲ್ಲದಿದ್ದರೂ ಎಸ್ಸೆಸ್ಸೆಫ್ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನನ್ನ ಹುಟ್ಟೂರು ತಾಲೂಕಿನಲ್ಲಿ ಸ್ವೀಕರಿಸಲು ಸಂತಸವಾಗುತ್ತದೆ' ಎಂದು ಹೇಳಿದರು.





