ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿಗೆ ಬಸವರಾಜ ಹೊರಟ್ಟಿ ಆಯ್ಕೆ

ಮಂಗಳೂರು, ಅ.5: ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ ಕಾರಂತ ಪ್ರಶಸ್ತಿ -2025ಕ್ಕೆ ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಬಸವರಾಜ ಹೊರಟ್ಟಿ ಶಿಕ್ಷಕರಾಗಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಸತತ ನಾಲ್ಕು ಬಾರಿ ಆಯ್ಕೆಗೊಂಡಿ ದ್ದಾರೆ. ರಾಜ್ಯ ಕ್ರೀಡಾ ಮಂಡಳಿಯ ಉಪಾಧ್ಯಕ್ಷರಾಗಿದ್ದರು.
ಪಶ್ಚಿಮ ಶಿಕ್ಷಕ ಮತಕ್ಷೇತ್ರದಿಂದ ಸತತ 8 ಬಾರಿ ಸ್ಪರ್ಧಿಸಿ ಗೆದ್ದು ರಾಷ್ಟ್ರದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ. 2004, 2006ರಲ್ಲಿ ಸಚಿವರಾಗಿ ವಿವಿಧ ಖಾತೆಯನ್ನು ನಿರ್ವಹಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಪ್ರತಿಮ ಸಾಧನೆಗೈದಿರುವ ಹೊರಟ್ಟಿ ಒಂದೇ ಕ್ಷೇತ್ರದಿಂದ ಸತತ 8 ಬಾರಿ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿ 43 ವರ್ಷಗಳಿಂದ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಹಿತ ಕಾಯುವಲ್ಲಿ ಶ್ರಮಿಸುತ್ತಿದ್ದಾರೆ. ಇವರ ಸಾಧನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಸೇರಿದೆ.







