ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಭಾಷಾ ದಿನಾಚರಣೆ

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ವತಿಯಿಂದ ಬ್ಯಾರಿ ಪರಿಷತ್ ಮಹಿಳಾ ಘಟಕದ ಸಹಯೋಗ ದಲ್ಲಿ ನಗರದ ಖಾಸಗಿ ಸಭಾಂಗಣದಲ್ಲಿ ಸೋಮವಾರ ಬ್ಯಾರಿ ಭಾಷಾ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ರಾಜ್ಯ ಸರಕಾರವು ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸುವ ಮೂಲಕ ಬ್ಯಾರಿ ಭಾಷೆಗೆ ಅಧಿಕೃತ ಮಾನ್ಯತೆ ನೀಡಿದೆ. ಸರಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ದಿನಾಂಕದಂದು ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸಲಾಗು ತ್ತದೆ. ನಾವು ಕೇವಲ ದಿನಾಚರಣೆ ಮಾಡಿದರೆ ಸಾಕಾಗದು. ಮಾತೃಭಾಷೆ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮನೆಯಲ್ಲಿ ಈಗ ಪಾಶ್ಚಾತ್ಯ ಸಂಸ್ಕೃತಿ ಹೆಚ್ಚುತ್ತಿವೆ. ಕಿಚನ್, ಬಾತ್‌ರೂಮ್‌ಗೆ ಬ್ಯಾರಿ ಪದ ಏನಂಬುದು ನಮ್ಮ ಮಕ್ಕಳಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಎಷ್ಟು ಭಾಷೆ ಕಲಿಸಲು ಸಾಧ್ಯ ಆಗುತ್ತದೆಯೋ ಅಷ್ಟು ಭಾಷೆಗಳನ್ನು ಕಲಿಸ ಬೇಕು. ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಕನಿಷ್ಠ ೧೪ ಭಾಷೆಗಳನ್ನು ಸಾಧ್ಯವಿದೆ. ಈ ನಿಟ್ಟಿನಲ್ಲೂ ಗಮನ ಹರಿಸಬೇಕಿದೆ ಎಂದು ಉಮರ್ ಯು.ಎಚ್. ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಗ್ರಾಮೀಣ ಪ್ರದೇಶದಲ್ಲಿ ಬ್ಯಾರಿ ಭಾಷಿಗರ ಘಟಕ ಮಾಡಬೇಕು ಎಂಬ ಬೇಡಿಕೆ ಇದೆ. ಅದರಂತೆ ಅಡ್ಡೂರು, ಬೆಳ್ತಂಗಡಿ ಕಡೆಯಲ್ಲಿ ಬ್ಯಾರಿ ಪರಿಷತ್ ಘಟಕ ಮತ್ತು ಕಾಪುವಿನಲ್ಲಿ ಬ್ಯಾರಿ ಪರಿಷತ್ ಮಹಿಳಾ ಘಟಕ ಸ್ಥಾಪಿಸುವ ಯೋಜನೆ ಇದೆ ಎಂದರು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ಅಲಿಯಬ್ಬ ಜೋಕಟ್ಟೆ, ಶಾಹುಲ್ ಹಮೀದ್ ಗುರುಪುರ, ಹಸನಬ್ಬ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು. ಯೂಸುಫ್ ವಕ್ತಾರ್ ಅಭಿನಂದನಾ ಭಾಷಣ ಮಾಡಿದರು. ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅ.ಭಾ.ಬ್ಯಾ.ಪ. ಸ್ಥಾಪಕ ಅಧ್ಯಕ್ಷ ಜೆ.ಹುಸೈನ್, ಅ.ಭಾ.ಬ್ಯಾ.ಪ.ಮಹಿಳಾ ಘಟಕದ ಅಧ್ಯಕ್ಷೆ ಶಮೀಮ ಕುತ್ತಾರ್ ಮಾತನಾಡಿದರು. ಶರೀಫ್ ನೀರ್ಮುಂಜೆ ಧ್ಯೇಯ ಗೀತೆ ಹಾಡಿದರು. ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು. ರೇಶ್ಮಾ ಕಿರಾಅತ್ ಪಠಿಸಿದರು. ಅ.ಭಾ.ಬ್ಯಾ.ಪ.ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಕೋಶಾಧಿಕಾರಿ ನಿಸಾರ್ ಅಹ್ಮದ್ ಫಕೀರ್ ವಂದಿಸಿದರು. ಪರಿಷತ್‌ನ ಮಹಿಳಾ ಘಟಕದ ಉಪಾಧ್ಯಕ್ಷೆ ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.







