ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಮಂಗಳೂರು, ಅ.6: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕೇಂದ್ರಗಳಲ್ಲಿ ತೆರವಾಗಿರುವ 57 ಅಂಗನವಾಡಿ ಕಾರ್ಯಕರ್ತೆ ಹಾಗೂ 221 ಅಂಗನವಾಡಿ ಸಹಾಯಕಿಯರ ಗೌರವಧನ ಸೇವೆಗಳ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆ 822 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಅವುಗಳು ಪರಿಶೀಲನೆಗೆ ಲಭ್ಯವಾಗುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಅ.20ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಿರುವ ಅರ್ಜಿ ಸಂಖ್ಯೆಯನ್ನು ಇಲಾಖೆಯ ವೆಬ್‌ಸೈಟ್ https:karnemakaone.kar.nic.in/abcd/ ನಲ್ಲಿ ನಮೂದಿಸಿ ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಕೆಯ ಎಲ್ಲಾ ಹಂತಗಳು ಪೂರ್ಣಗೊಂಡಿರದಿದ್ದಲ್ಲಿ ಪೂರ್ಣಗೊಳಿಸಬೇಕು.ಯಾವುದೇ ಹಂತ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಅರ್ಜಿಗಳು ಪರಿಶೀಲನೆಗೆ ಲಭ್ಯವಾಗದೆ ಅಪೂರ್ಣ ಅರ್ಜಿ ಎಂದು ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು 3 ಹಂತಗಳನ್ನು ಅನುಸರಿಸಬೇಕು. ಅಂದರೆ ಮೊದಲ ಹಂತದಲ್ಲಿ ಆನ್‌ಲೈನ್ ನಲ್ಲಿ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಬೇಕು. ಎರಡನೇ ಹಂತದಲ್ಲಿ ಸಹಿ ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ ನಂತರ ಇ-ಸೈನ್ ಹಂತವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಮೂರನೇ ಹಂತದಲ್ಲಿ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಹೆಚ್ಚಿನ ಮಾಹಿತಿಗೆ ನಗರದ ಮೆಸ್ಕಾಂ ಭವನದ ಹತ್ತಿರ ಇರುವ ಜಿಲ್ಲಾ ಸ್ತ್ರೀಶಕ್ತಿ ಭವನದ 2ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ (ದೂ.ಸ: 0824-2451254, 2453071) ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







