ವಾಹನ ಕಳವುಗೈದಿದ್ದ ಪ್ರಕರಣ: ಅಂತರ್ ರಾಜ್ಯ ಕಳವು ಆರೋಪಿ ಸೆರೆ

ಸುರತ್ಕಲ್ : ಸುರತ್ಕಲ್ ಪೊಲೀಸ್ ಠಾಣೆ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಕಳವು ಗೈದಿದ್ದ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಸೊತ್ತು ಸಹಿತ ಬಂಧಿಸಿದ್ದಾರೆ.
ಬಂಧಿತನನ್ನು ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ರಾತಿಕ್ಕಲ್ ವರ್ಕಲಾ ಗ್ರಾಮದ ನಿವಾಸಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ (29) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2025ರ ಸೆ. 30ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ನಿವಾಸಿ ಸುಕುಮಾರ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ಬಂಧನಕ್ಕಾಗಿ ಹುಡುಕಾಡುತ್ತಿದ್ದ ವೇಳೆ ಅ.7ರಂದು ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಂಝನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿಯು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಗೈದು ಅದರಲ್ಲಿ ಸುತ್ತಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ ನ ವಿರುದ್ಧ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಪತ್ತೆ ಕಾರ್ಯವನ್ನು ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಶಿಧರ ಶೆಟ್ಟಿ, ಎಎಸ್‌ಐ ರಾಜೇಶ್ ಆಳ್ವ, ಸಿಬ್ಬಂದಿಗಳಾದ ಉಮೇಶ್, ವಿನೋದ್ ಕುಮಾರ್, ನಾಗರಾಜ್, ಸುನೀಲ್ ಕುಮಾರ್ ಭಾಗವಹಿಸಿದ್ದರು.







