ಕಡಲಲ್ಲಿ ತುರ್ತು ಸುರಕ್ಷಾ ಕಾರ್ಯಾಚರಣೆ: ಕರಾವಳಿ ಭದ್ರತಾ ಪಡೆಯಿಂದ ಅಣುಕು ಪ್ರದರ್ಶನ

ಮಂಗಳೂರು,ಅ.9: ಸಮುದ್ರದ ಮಧ್ಯೆ ತುರ್ತು ಅವಘಡ, ಶತ್ರು ಪಡೆಗಳ ಆಕ್ರಮಣ ತಡೆಯುವ ನಿಟ್ಟಿನಲ್ಲಿ ನಡೆಸಲಾಗುವ ಸುರಕ್ಷಾ ಕಾರ್ಯಾಚರಣೆಯ ಅಣುಕು ಪ್ರದರ್ಶನ ಗುರುವಾರ ಭಾರತೀಯ ಕರಾವಳಿ ಭದ್ರತಾ ಪಡೆಯಿಂದ ನಡೆಯಿತು.
ನವಮಂಗಳೂರು ಬಂದರಿನಿಂದ ಮಂಗಳೂರು ಮೂಲದ ‘ವಿಕ್ರಂ’ ಹಡಗಿನಲ್ಲಿ ತೆರಳಿದ ಆಹ್ವಾನಿತ ಗಣ್ಯರು, ಕೋಸ್ಟ್‌ಗಾರ್ಡ್ ಸಿಬ್ಬಂದಿ ಹಾಗೂ ಪತ್ರಕರ್ತರ ಸಮಕ್ಷಮ ಸಮುದ್ರ ಮಧ್ಯೆ, ಬಂದರಿನಿಂದ ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು.
ಎನ್‌ಎಂಪಿಎಯ ಸಮುದ್ರ ತೀರದಲ್ಲಿ ಮುಂಬೈನ ಕೋಸ್ಟ್ ಗಾರ್ಡ್ ಪ್ರಾದೇಶಿಕ ಪ್ರಧಾನ ಕಚೇರಿ(ಪಶ್ಚಿಮ) ಆಶ್ರಯದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ- ಕರ್ನಾಟಕದ ವತಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಕೋಸ್ಟ್‌ಗಾರ್ಡ್‌ನ ಸುಸಜ್ಜಿತ ಕಣ್ಗಾವಲು ನೌಕೆಗಳು, ಅತ್ಯಾಧುನಿಕ ಹೆಲಿಕಾಪ್ಟರ್, ಇಂಟರ್ ಸೆಪ್ಟರ್ ಬೋಟ್‌ಗಳ ಮೂಲಕ ಸಮರ ಕವಾಯತುಗಳನ್ನ ಪ್ರದರ್ಶಿಸಲಾಯಿತು. ಕೋಸ್ಟ್ ಗಾರ್ಡ್‌ನ ಸುಮಾರು 300ಕ್ಕೂ ಅಧಿಕ ಸಿಬಂದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಡಿಜಿಪಿ ಡಾ. ಪ್ರಣಬ್ ಮೊಹಂತಿ, ಕೋಸ್ಟ್‌ಗಾರ್ಡ್ ಜಿಲ್ಲಾ ಹೆಡ್‌ಕ್ವಾರ್ಟರ್‌ನ ಡಿಐಜಿ ಪಿ.ಕೆ. ಮಿಶ್ರಾ, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯತ್ ಸಿಇಒ ನರ್ವಡೆ ವಿನಾಯಕ ಕಾರ್ಭಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.







