ಆಭರಣ ಪಾಲಿಶಿಂಗ್ ನೆಪದಲ್ಲಿ ಮಹಿಳೆಗೆ ವಂಚನೆ: ಪ್ರಕರಣ ದಾಖಲು

ಉಳ್ಳಾಲ: ಆಭರಣಗಳನ್ನು ಪಾಲಿಶಿಂಗ್ ಮಾಡಿಕೊಡುವ ಸೋಗಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ವಿಧವೆಯೋರ್ವರನ್ನು ಯಾಮಾರಿಸಿ ಆಕೆಯ ಕತ್ತಿನ ಸರದಿಂದ 14 ಗ್ರಾಂ ಚಿನ್ನವನ್ನು ಕರಗಿಸಿ ಹೊತ್ತೊಯ್ದ ಘಟನೆ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಎಂಬಲ್ಲಿ ನಡೆದಿದೆ.
ಉಳ್ಳಾಲ ತಾಲೂಕಿನ ಅಂಬ್ಲಮೊಗರು ನಿವಾಸಿ ಸುಂದರಿ (60) ವಂಚಕನಿಂದ ಮೋಸ ಹೋದವರು.
ಸುಂದರಿಯವರು ದಿನನಿತ್ಯಲೂ ಸುದರ್ಶನ್ ಶೆಟ್ಟಿ ರವರ ಮನೆಗೆ ಮನೆಕೆಲಸಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಮರಳುತ್ತಿದ್ದರು. ಬುಧವಾರವೂ ಕೆಲಸಕ್ಕೆ ತೆರಳಿದ್ದ ಅವರು ಬೆಳಿಗ್ಗೆ 11.30ಕ್ಕೆ ಕೆಲಸ ಮುಗಿಸಿ ಹಿಂತಿರುಗಿದ್ದರು. ಅವರು ಮನೆಯ ಕಡೆ ತೆರಳುತ್ತಿದ್ದ ವೇಳೆ ಅಂಬ್ಲಮೊಗರುವಿನ ಕಂಬಳ ಗದ್ದೆಯ ನಿರ್ಜನ ಬದು(ಪುಣಿ)ವಲ್ಲಿ ಓರ್ವ ಅಪರಿಚಿತ ಮಧ್ಯ ವಯಸ್ಕ ಎದುರಾಗಿದ್ದು ಈ ಪ್ರದೇಶದಲ್ಲಿ ಎಷ್ಟು ಮನೆಗಳು ಇವೆಯೆಂದು ಸುಂದರಿಯವರಲ್ಲಿ ವಿಚಾರಿಸಿದ್ದ.ಈ ವೇಳೆ ಆತ ತನ್ನಲ್ಲಿದ್ದ ಬ್ಯಾಗಿಂದ ಚಿನ್ನವನ್ನು ಹೋಲುವ ಬಳೆಯೊಂದನ್ನು ಹೊರತೆಗೆದು ತೋರಿಸಿ ತಾನು ಈ ರೀತಿ ಹೊಳಪು ಬರುವಂತೆ ಚಿನ್ನಾಭರಣಗಳನ್ನ ಪಾಲಿಶ್ ಮಾಡುತ್ತೇನೆಂದು ಹೇಳಿಕೊಂಡಿದ್ದು, ನಿಮ್ಮಲ್ಲಿರುವ ಚಿನ್ನದ ಸರವನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದ. ಆರಂಭದಲ್ಲಿ ನಿರಾಕರಿಸಿದ ಮಹಿಳೆ ಬಳಿಕ 18 ಗ್ರಾಂ ತೂಗುವ ಚಿನ್ನದ ಸರವನ್ನು ತೆಗೆದು ಅಪರಿಚಿತನಿಗೆ ನೀಡಿದ್ದಾರೆ. ಅಪರಿಚಿತನು ಸರವನ್ನು ಯಾವುದೋ ನೀರಲ್ಲಿ ಸ್ವಲ್ಪ ಹೊತ್ತು ಅದ್ದಿ ತೆಗೆದು ಮಹಿಳೆಗೆ ಹಿಂತಿರುಗಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸರದ ಗಾತ್ರ ಇದ್ದಕ್ಕಿಂದ್ದಂತೆ ಕಡಿಮೆ ಆದುದನ್ನು ಕಂಡು ವಿಚಲಿತರಾದ ಮಹಿಳೆ ಸರವನ್ನು ಜ್ಯುವೆಲ್ಲರಿ ಒಂದರ ಮಾಪನದಲ್ಲಿ ಪರಿಶೀಲಿಸಿದಾಗ ಅದರಲ್ಲಿ 14 ಗ್ರಾಂನಷ್ಟು ಚಿನ್ನವು ಕರಗಿಹೋಗಿದ್ದು, ತಾನು ಮೋಸ ಹೋಗಿರುವ ಬಗ್ಗೆ ಆಕೆಗೆ ಅರಿವಾಗಿದೆ.
ಅಂಬ್ಲಮೊಗರು ಪ್ರದೇಶದ ಜನರು ಮಹಿಳೆಯ ಚಿನ್ನವನ್ನು ತೊಳೆದು ಯಾಮಾರಿಸಿದ ವ್ಯಕ್ತಿಯನ್ನ ಹುಡುಕಾಟ ನಡೆಸಿದ್ದು ಈ ವೇಳೆ ಗೆ ಆತ ಪರಾರಿ ಆಗಿದ್ದ. ಈ ಬಗ್ಗೆ ಸುಂದರಿ ಬುಧವಾರ ಸಂಜೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.





