ಮಾದಕ ವಸ್ತು ಮಾರಾಟ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಅ.9: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಮಾದಕ ಸೇವನೆ ಮತ್ತು ಮಾದಕ ವಸ್ತು ಮಾರಾಟ ಆರೊಪದಲ್ಲಿ ಕದ್ರಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಎ.ಎಚ್. ಇಮ್ತಿಯಾಜ್ ಬಂಧಿತ ಆರೋಪಿ. ಅ.7ರಂದು ಇಮ್ತಿಯಾಜ್ ಮತ್ತು ಆತನ ಸ್ನೇಹಿತ ಸರ್ಫ್ರಾಜ್ ಯಾನೆ ಚಪ್ಪು ಬೆಂಗ್ರೆಯಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಕೆಪಿಟಿ ಬಳಿ ಸ್ಕೂಟರ್ ಹತೋಟಿ ತಪ್ಪಿ ರಸ್ತೆಗೆ ಬಿದ್ದಿದೆ. ಈ ಸಂದರ್ಭ ಗಾಯಗೊಂಡ ಇಮ್ತಿಯಾಜ್‌ನನ್ನು ನಗರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ನಿಷೇಧಿತ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಅದರಂತೆ ಈತನನ್ನು ವಿಚಾರಿಸಿದಾಗ ಸ್ಕೂಟರ್‌ನ ಸೀಟಿನಡಿಯಲ್ಲಿ ಪ್ಲಾಸ್ಟಿಕ್ ಪ್ಯಾಕೆಟೊಂದರಲ್ಲಿ ಎಂಡಿಎಂಎ ಅಮಲು ಪದಾರ್ಥ ಪತ್ತೆಯಾಗಿದೆ. ಇದನ್ನು ಆತ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ವಿಚಾರಣೆ ಆತ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಬಳಿ ಇದ್ದ 8ಸಾವಿರ ರೂ. ಮೌಲ್ಯದ 1.93 ಗ್ರಾಂ ತೂಕದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





