ಬಿ.ಸಿ.ರೋಡ್: ಕನಿಷ್ಠಕೂಲಿ, ತುಟ್ಟಿಭತ್ತೆ ಪಾವತಿಸುವಮತೆ ಆಗ್ರಹಿಸಿ ಹಕ್ಕೊತ್ತಾಯ ಸಭೆ

ಬಂಟ್ವಾಳ, ಅ.14: ಆರು ವರ್ಷಗಳ (2016-2024) ಕಾಲದ ಕನಿಷ್ಠ ಕೂಲಿಯನ್ನು ಪಾವತಿಸುವಂತೆ ಹಾಗೂ 2024ರಿಂದ ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸಲು ಆಗ್ರಸಿ ಎಐಟಿಯುಸಿ ಮತ್ತು ಸಿಐಟಿಯು ಬಂಟ್ವಾಳ ತಾಲೂಕಿನ ಬೀಡಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಹಕ್ಕೊತ್ತಾಯ ಸಭೆಯು ಬಿ.ಸಿ. ರೋಡಿನ ಭಾರತ್ ಬೀಡಿ ಕಂಪೆನಿಯ ಮುಂದೆ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸೀತರಾಮ ಬೇರಿಂಜ ಸರಕಾರ ಮತ್ತು ಬೀಡಿ ಮಾಲಕರು ಕಾರ್ಮಿಕರನ್ನು ಮೋಸ ಮಾಡುತ್ತಲೇ ಇದ್ದಾರೆ. 2018ರಿಂದ 2024 ರವರೆಗೆ ಆರು ವರ್ಷಗಳ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ಈವರೆಗೆ ಪಾವತಿಸಿಲ್ಲ. ಬೀಡಿ ಮಾಲಕರು ಈಗಾಗಲೇ ನೀಡಲು ಒಪ್ಪಿರುವ ಮೊತ್ತವನ್ನು ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಎಐಟಿಯುಸಿ ಮುಖಂಡ ವಿ.ಕುಕ್ಯಾನ್, ಜಿಲ್ಲಾ ಸಹ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಉಮವತಿ ಕುರ್ನಾಡು, ಹರ್ಷಿತ್, ಎಂ.ಬಿ. ಭಾಸ್ಕರ, ಶಮಿತ, ಭಾರತಿ ಪ್ರಶಾಂತ್, ಕೆ.ಜಯಮತ, ಮೋಹನ ಅರಳ, ಸರೋಜಿನಿ, ಯೋಗಿನಿ, ಕುಸುಮ ಕಳ್ಳಿಗೆ, ಮೋಹಿನಿ, ಸಿಐಟಿಯು ಮುಖಂಡ ಲೋಲಾಕ್ಷಿ, ಉದಯ ಕುಮಾರ್, ಜಯಂತ. ನಾರಾಯಾಣ ನೇತೃತ್ವ ವಹಿಸಿದ್ದರು.
ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಸಿಐಟಿಯು ಮುಖಂಡ ಉದಯ ಕುಮಾರ್ ವಂದಿಸಿದರು.







