ಗ್ಯಾರಂಟಿ ಫಲಾನುಭವಿಗಳಿಗೆ ನೆರವು: ಭರತ್ ಮುಂಡೋಡಿ ಸೂಚನೆ

ಮಂಗಳೂರು,ಅ.14: ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಮಸ್ಯೆಯಾದಲ್ಲಿ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ನೆರವು ನೀಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ದ.ಕ. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಮಿತಿಯ ಎಲ್ಲಾ ಸದಸ್ಯರು ತಮ್ಮ ಹಂತದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಯುವನಿಧಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಗ್ಯಾರಂಟಿ ಯೋಜನೆಯಿಂದ ಸಾರ್ವಜನಿಕರಿಗೆ ಆದ ಅನುಕೂಲತೆಯ ಬಗ್ಗೆ ಪ್ರತಿ ತಾಲೂಕಿನಿಂದ ಸಾಕ್ಷ್ಯ ಚಿತ್ರಗಳನ್ನು ಮಾಡಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 3,79,557 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭ ಮೈಸೂರು ಉದ್ಯೋಗ ಮೇಳದ ಪೋಸ್ಟರನ್ನು ಭರತ್ ಮುಂಡೋಡಿ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ನರ್ವಾಡೆ ನಾಯಕ್ ಕಾರ್ಬಾರಿ, ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್., ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿಸೋಜ, ಸುರೇಖಾ ಚಂದ್ರಹಾಸ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ., ಶಾಹುಲ್ ಹಮೀದ್ ಕೆ, ಉಮಾನಾಥ್ ಶೆಟ್ಟಿ, ಬಿ. ಪದ್ಮನಾಭ ಸಾಲ್ಯಾನ್, ಸುರೇಂದ್ರ ಕಂಬಳಿ, ರಂಜಿತ್ ರೈ, ಆಲ್‌ಸ್ಟನ್ ಕ್ಲೈವ್ ಡಿಕುನ್ಹ ಉಪಸ್ಥಿತರಿದ್ದರು.







