ಹವ್ಯಾಸಿ ಕಲಾವಿದನ ಕುಂಚದಲ್ಲಿ ‘ಮಂಗಳಾದೇವಿ’ ಕ್ಷೇತ್ರಕ್ಕೆ ಕಲಾ ಕಾಣಿಕೆ ಅರ್ಪಣೆ

ಮಂಗಳೂರು, ಅ. 15: ಪ್ರತಿಭೆಗೆ ಯಾವುದೇ ಮಾನದಂಡವಾಗಲಿ, ಅಡೆತಡೆಗಳಾಗಲಿ ಇಲ್ಲ ಎನ್ನುವುದಕ್ಕೆ ಈ ಕಲಾವಿದ ಉದಾಹರಣೆ. ವೃತ್ತಿಯಲ್ಲಿ ಮೀನುಗಾರಿಕಾ ಬೋಟ್ ನಿರ್ಮಾಣ ಕಾರ್ಯ ಮಾಡುವ ರಜತ್ ಉಳ್ಳಾಲ್ ಮಹತೋಭಾರ ಮಂಗಳಾದೇವಿಯ ಚಿತ್ರವನ್ನು ಬೃಹತ್ ಕ್ಯಾನ್ವಾಸ್ ಬೋರ್ಡ್‌ನಲ್ಲಿ ಚಿತ್ರಿಸಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
6.45 ಅಡಿ ಎತ್ತರದ ಕ್ಯಾನ್ವಾಸ್ ಬೋರ್ಡ್‌ನಲ್ಲಿ ಆಯಿಲ್ ಪೈಂಟ್‌ನಲ್ಲಿ ಚಿತ್ರಿಸಿರುವ ಮಂಗಳಾದೇವಿಯ ಚಿತ್ರ ಮೋಲ್ನೋಟಕ್ಕೆ ಫೋಟೋವನ್ನೇ ಹೋಲುತ್ತದೆ. ಹವ್ಯಾಸಿ ಕಲಾವಿದನಾಗಿರುವ ರಜತ್ ಉಳ್ಳಾಲ್ ತನ್ನ ಸ್ನೇಹಿತರು, ಪೋಷಕರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಮಂಗಳಾದೇವಿ ಕ್ಷೇತ್ರಕ್ಕೆ ತಮ್ಮ ಕಲಾ ಕಾಣಿಕೆಯನ್ನು ಸಮರ್ಪಿಸಿದ್ದಾರೆ.
‘ಈ ಚಿತ್ರ ರಚನೆಗಾಗಿ 500 ಗಂಟೆ ತಗಲಿದೆ. ಬೆಳಗ್ಗಿನಿಂದ ಸಂಜೆಯವರೆಗೆ ನಾನು ಬೋಟ್ ನಿರ್ಮಾಣದ ಕೆಲಸ ನಿರ್ವಹಿಸುತ್ತೇನೆ. ಬಿಡುವಿನ ವೇಳೆಯಲ್ಲಿ ಚಿತ್ರ ರಚನೆ ಮಾಡುತ್ತಿದೆ. ಕಳೆದ ಸುಮಾರು ಒಂದು ವರ್ಷದಿಂದ ಈ ಚಿತ್ರ ರಚನಾ ಕಾರ್ಯ ನಡೆಸಿದ್ದೇನೆ. ಹವ್ಯಾಸಿ ಕಲಾವಿದನಾದ ನನಗೆ ದೇವರ ಚಿತ್ರ ಬಿಡಿಸುವ ಆಸಕ್ತಿ. ಎರಡು ವರ್ಷದ ಹಿಂದೆ ಮಾರಿಗುಡಿಗೆ ದೇವಿಯ ಚಿತ್ರ ರಚಿಸಿ ಅರ್ಪಿಸಿದ್ದೆ. ಮಂಗಳಾದೇವಿ ಕ್ಷೇತ್ರದಿಂದ 2 ವರ್ಷಗಳ ಹಿಂದೆ ಚಿತ್ರ ರಚಿಸಲು ಅನುಮತಿ ಪಡೆದಿದ್ದೆ. ಮುಂದೆ ಕಟೀಲು ದೇವಿ, ಉಡುಪಿಯ ಕೃಷ್ಣ ದೇವರ ಚಿತ್ರ ಬರೆಯುವ ಆಸೆ ಇದೆ’ ಎಂದು ರಜತ್ ಉಳ್ಳಾಲ್ ತಿಳಿಸಿದ್ದಾರೆ.
ಯಶವಂತ್ ಮತ್ತು ಗಿರಿಜಾ ದಂಪತಿಯ ಪುತ್ರ ರಜತ್ ಉಳ್ಳಾಲ್ ಬಾಲ್ಯದಿಂದಲೇ ಚಿತ್ರ ರಚಿಸುವ ಆಸಕ್ತಿ ಬೆಳೆಸಿ ಕೊಂಡವರು. ಕಳೆದ ಸುಮಾರು 9 ವರ್ಷಗಳಿಂದ ತನ್ನ ಕೆಲಸದ ಬಿಡುವಿನ ವೇಳೆಯಲ್ಲಿ ಚಿತ್ರ ರಚನೆಯಲ್ಲಿ ತೊಡ ಗಿದ್ದು, ಯಾರಿಂದಲೂ ತರಬೇತಿ ಅಥವಾ ಮಾರ್ಗದರ್ಶನವಿಲ್ಲದೆ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.







