ಹಜ್ ಯಾತ್ರಿಕರಿಗೆ ಮಂಗಳೂರಿನಿಂದಲೇ ವಿಮಾನ ಸೌಲಭ್ಯಕ್ಕೆ ಮಾಜಿ ಎಂಎಲ್‌ಸಿ ಮುಹಮ್ಮದ್ ಮಸೂದ್ ಒತ್ತಾಯ

ಮಂಗಳೂರು: ಕರಾವಳಿ ಜಿಲ್ಲೆಗಳ ಯಾತ್ರಿಕರಿಗೆ ಅನುಕೂಲವಾಗುವಂತೆ ಹಜ್ ಯಾತ್ರೆಗೆ ಮಂಗಳೂರಿನಿಂದಲೇ ನೇರ ವಿಮಾನವನ್ನು ಆರಂಭಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಮುಹಮ್ಮದ್ ಮಸೂದ್ ಅವರು ಕೇಂದ್ರ ಹಜ್ ಮತ್ತು ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದಾರೆ.
ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಕರಾವಳಿ ಪ್ರದೇಶವನ್ನು ಸಂಪರ್ಕಿಸುವ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಕರ್ನಾಟಕದ ಕರಾವಳಿ ಪ್ರದೇಶವು ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರೆಗೆ ವ್ಯಾಪಿಸಿದೆ.
ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕ ರಾಜ್ಯದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ದೇಶೀಯ ತಾಣಗಳ ಜೊತೆಗೆ, ಮಧ್ಯಪ್ರಾಚ್ಯದ ಪ್ರಮುಖ ನಗರಗಳಿಗೆ ಪ್ರತಿದಿನ ವಿಮಾನ ಗಳು ಈ ನಗರದಿಂದ ಸಂಪರ್ಕಿಸುತ್ತದೆ. ಪ್ರಸ್ತುತ ಇದು ಅಂತರ್‌ರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.
ಸೆಪ್ಟೆಂಬರ್ 2012ರಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ಹಜ್ ವಿಮಾನ ತೆರಳಿತ್ತು. ಕೋವಿಡ್ ಕಾರಣದಿಂದಾಗಿ ಮಂಗಳೂರು ಎಂಬಾರ್ಕೇಶನ್ ಪಾಯಿಂಟ್ ರದ್ದಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಅದು ಮತ್ತೆ ಪ್ರಾರಂಭವಾಗಲಿಲ್ಲ.
2012ರಿಂದ 2019ರ ಅವಧಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಕೊಡಗು ಜಿಲ್ಲೆ ಮತ್ತು ಹಾಸನ ಜಿಲ್ಲೆಯ ಸಾವಿರಾರು ಹಜ್ ಯಾತ್ರಿಕರು ಮಂಗಳೂರು ಎಂಬಾರ್ಕೇಶನ್ ಪಾಯಿಂಟ್‌ನಿಂದ ಹಜ್ ಯಾತ್ರೆಗೆ ಪ್ರಯಾಣಿಸಿದ್ದಾರೆ. ಮತ್ತು ಕಳೆದ ಹಲವಾರು ವರ್ಷಗಳಿಂದ ವಾರ್ಷಿಕವಾಗಿ 1500ಕ್ಕೂ ಹೆಚ್ಚು ಯಾತ್ರಿಕರು ಪ್ರಯಾಣಿಸುತ್ತಿದ್ದಾರೆ.
ಭಾರತೀಯ ಹಜ್ ಸಮಿತಿಯು ಮಂಗಳೂರಿನಿಂದ 345 ಕಿ.ಮೀ ದೂರದಲ್ಲಿರುವ ಬೆಂಗಳೂರಿಗೆ ಎಂಬಾರ್ಕೇಶನ್ ಪಾಯಿಂಟ್‌ನ್ನು ನಿಗದಿಪಡಿಸಿದೆ. ಇದರಿಂದ ವಯಸ್ಸಾದವರಿಗೆ , ಮಹಿಳಾ ಯಾತ್ರಿಕರಿಗೆ ಬೆಂಗಳೂರಿಗೆ ಪ್ರಯಾಣಿ ಸಲು ತುಂಬಾ ಕಷ್ಟಕರವಾಗಿದೆ. ದೂರದ ಪ್ರಯಾಣದ ಜೊತೆಗೆ, ಕನಿಷ್ಠ ಟ್ಯಾಕ್ಸಿ ದರ ರೂ.10,516 ಆಗಿದ್ದು, ಹಲವಾರು ಟೋಲ್ ಬೂತ್‌ಗಳಿವೆ. ಯಾತ್ರಿಕರ ಕುಟುಂಬವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕಿರಣ್ ರಿಜಿಜು ಅವರಿಗೆ ಬರೆದಿರುವ ಪತ್ರದಲ್ಲಿ ಮುಹಮ್ಮದ್ ಮಸೂದ್ ವಿವರಿಸಿದ್ದಾರೆ.







