ಕೊಂಕಣಿ ಅಕಾಡಮಿಯಿಂದ ಸಾಹಿತ್ಯ ಭಂಡಾರ ಕಾರ್ಯಕ್ರಮ

ಮಂಗಳೂರು, ಅ.19: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ನಗರದ ಹಂಪನಕಟ್ಟೆಯಲ್ಲಿರುವ ಎಂಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ರವಿವಾರ ಸಾಹಿತ್ಯ ಭಂಡಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ ಅಕಾಡಮಿಯು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದೆ. ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಅವರನ್ನು ಗೌರವಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಲೇರಿಯನ್ ರಾಡ್ರಿಗಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊಂಕಣಿ ಸಾಹಿತಿಗಳು ಬರೆದ 9 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕೃತಿಕಾರರ ಪರವಾಗಿ ಜ್ಯೋ ಲೋಬೊ ಅನಿಸಿಕೆ ವ್ಯಕ್ತಪಡಿಸಿದರು. ಕನ್ನಡದಿಂದ ಕೊಂಕಣಿಗೆ ಲಿಲ್ಲಿ ಮಿರಾಂದಾ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಪುಸ್ತಕದ ಇ-ಬುಕ್ ಆವೃತ್ತಿಯನ್ನು ಪತ್ರಕರ್ತ ವಾಲ್ಟರ್ ನಂದಳಿಕೆ ಬಿಡುಗಡೆಗೊಳಿಸಿದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅತಿಥಿಗಳಾಗಿ ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ, ಪ್ರಸಕ್ತ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿರುವ ವಿನ್ಸೆಂಟ್ ರಿಚರ್ಡ್ ಡಿಸೋಜ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಕೊಂಕಣಿ ಅಕಾಡಮಿಯು ಹಮ್ಮಿಕೊಂಡ ಸಾಹಿತ್ಯ ಸ್ಪರ್ಧೆಯಲ್ಲಿ ಕಾದಂಬರಿ ವಿಭಾಗದ ವಿಜೇತರಾದ ರೋಶನ್ ಮೆಲ್ಕಿ ಸಿಕ್ವೇರಾ, ವಿನ್ಸೆಂಟ್ ಪಿಂಟೊ, ಆಂಜೆಲೊರ್, ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಹಾಗೂ ಕಿರುನಾಟಕ ವಿಭಾಗದ ವಿಜೇತರಾದ ಹಿಲರಿ ಡಿಸಿಲ್ವ (ಪ್ರಸನ್ನ್ ನಿಡ್ಡೋಡಿ), ಫಾ. ಅನಿಲ್ ಅವಿಲ್ಡ್ ಲೋಬೊ ಅವರಿಗೆ ಎಂ.ಸಿ.ಸಿ. ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಅಕಾಡಮಿಯ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಸುನಿಲ್ ಸಿದ್ದಿ, ಸಪ್ನಾ ಮೇ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ನವೀನ್ ಲೋಬೊ ವಂದಿಸಿದರು. ಕ್ರಿಸ್ಟೋಫರ್ ಅನಿಲ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.







