ದ.ಕ. ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ

ಮಂಗಳೂರು, ಅ.19: ದ.ಕ.ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ರಾತ್ರಿ ಮತ್ತು ರವಿವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ 8ರಿಂದ ರವಿವಾರ ಬೆಳಗ್ಗಿನ 8 ಗಂಟೆಯವರೆಗೆ 10.1 ಮಿಮಿ ಮಳೆ ದಾಖಲಾಗಿದೆ.
ಜಿಲ್ಲೆಯಲ್ಲಿ ಇನ್ನೂ 10 ದಿನಗಳ ಕಾಲ ಭಾರೀ ಅಥವಾ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪ್ರಭಾವವು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. ಅದರ ಪರಿಣಾಮ ದ.ಕ.ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ರವಿವಾರ ಸಂಜೆ ಸುರಿದ ದಿಢೀರ್ ಮಳೆಗೆ ನಗರದ ಪಂಪ್‌ವೆಲ್‌ನಲ್ಲಿ ಸಂಚಾರ ಜಾಮ್ ಆಯಿತು. ಮಳೆ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಯಲ್ಲೇ ನಿಂತ ಕಾರಣ ವಾಹನಿಗರು ಪರದಾಡಬೇಕಾಯಿತು. ಪ್ರತೀ ಬಾರಿಯ ಬಿರುಸಿನ ಮಳೆಗೆ ಪಂಪ್‌ವೆಲ್ ರಸ್ತೆಯು ಜಲಾವೃತವಾಗುತ್ತಿದ್ದು, ರವಿವಾರ ಸಂಜೆಯ ದೃಶ್ಯವು ವ್ಯಂಗ್ಯದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.





