ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಂಗಳೂರು ಅ.19: ‘‘ವೈದ್ಯಕೀಯ ಸೇವಾ ವೃತ್ತಿಯು ಪ್ರಾಮಾಣಿಕತೆ, ಮಾನವತೆ, ಸೇವಾ ಮನೋಭಾವದ ವ್ರತ್ತಿಯಾಗಿರಬೇಕು ಅಲ್ಲದೆ ವ್ಯಾವಹಾರಿಕವಾಗಿರಬಾರದು ಎಂದು ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಾ. ಸಿ. ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.
ನಗರದ ಐಎಮ್‌ಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ 2025-26 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ವೈದ್ಯರು ರೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಯ ಮಟ್ಟಕ್ಕೆ ಸ್ಪಂಧಿಸಬೇಕು ಹಾಗೂ ಅವರ ಆರ್ಥಿಕ ಹಿನ್ನೆಲೆ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ಶ್ರೇಷ್ಠ ಆಧುನಿಕ ಶೈಲಿಯ ಶಸ್ತ್ರತಜ್ಞ ಜ್ಞಾನವನ್ನು ಬಳಸಿ ಬಡವರಿಗೆ ಸೇವೆಯನ್ನು ನೀಡಬೇಕು ಎಂದರು.
ದೇಶದಲ್ಲಿ ಲಕ್ಷಾಂತರ ಜನರು ರಸ್ತೆ ಅಘಾತದಲ್ಲಿ ಪ್ರತಿ ವರ್ಷ ಬಲಿಯಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು ಸರಕಾರವು ರಸ್ತೆ ಪ್ರಯಾಣದ ಸುರಕ್ಷತೆಯನ್ನು ಕಾಪಾಡಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.
ಬಳಿಕ ಸಂಸ್ಥೆಯ ಗೃಹ ವಾರ್ತಾಪತ್ರಿಕೆಯಾದ ‘‘ಮೆಡಿಲೋರ್’’ ಅನ್ನು ಬಿಡುಗಡೆಗೊಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ವೆಂಕಟ್ರಾಯ ಪ್ರಭು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಪದಾಧಿಕಾರಿಗಳ ಪದಗ್ರಹಣದ ವಿಧಿವಿಧಾನಗಳನ್ನು ನೆರವೇರಿಸಿ ತಂಡಕ್ಕೆ ಯಶಸ್ಸು ಕೋರಿದರು.
ಈ ಸಂದರ್ಭದಲ್ಲಿ ನಗರದ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಹಾಗೂ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಶೆಟ್ಟಿ ವೈದ್ಯಕೀಯ ಕ್ಷೇತ್ರಕ್ಕೆ ನೀಡದ ಅಮೂಲ್ಯ ಕೊಡುಗೆ ಮತ್ತು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಡಾ. ಸದಾನಂದ ಪೂಜಾರಿ ಇದೊಂದು ಅತ್ಯಂತ ಜವಾಬ್ದಾರಿಯುತ ಮತ್ತು ಸವಾಲುಗಳನ್ನು ಎದುರಿಸುವ ಹುದ್ದೆಯಾಗಿದ್ದು, ಅದನ್ನು ಧೈರ್ಯವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ ಎಂದು ಆಶ್ವಾಸನೆ ನೀಡಿ, ತಮ್ಮ ಅಧಿಕಾರವಧಿಯಲ್ಲಿ ಹಲವಾರು ಶೈಕ್ಷಣಿಕ, ವೈಜ್ಞಾನಿಕ, ವೈದ್ಯಕೀಯ ಶಿಬಿರ ಮತ್ತು ಮನೋರಂಜನಾ, ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಸದಸ್ಯರ ಉತ್ಸಾಹ ಮತ್ತು ಪ್ರೋತ್ಸಾಹ ಕೋರಿದರು.
ಈ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಾದ ಹಲ್ಲೆ, ಬೆದರಿಕೆಗಳನ್ನು ಪರಿಹರಿಸಲು ಮುಖ್ಯ ಮಂತ್ರಿಗಳಿಗೆ ಸಂಭೋದಿಸಿದ ಮನವಿ ಪತ್ರವನ್ನು ಸಂಸದರ ಮುಖಾಂತರ ಹಸ್ತಾಂತರಿಸಲಾಯಿತು.
ಎಮ್‌ಎಲ್‌ಸಿ ಐವನ್ ಡಿ ಸೋಜ ಗೌರವ ಅಥಿತಿಯಾಗಿ ಪಾಲ್ಗೊಂಡು ವೈದ್ಯರ ಅಮೂಲ್ಯ ಸೇವೆಯನ್ನು ಶ್ಲಾಘಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುವುದಾಗಿ ಆಶ್ವಾಸನೆ ನೀಡಿದರು. ನಗರದ ವೆನ್ಲಾಕ್ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಕ ಹಾಗೂ ಆಧೀಕ್ಷಕ ಡಾ. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ತಂಡಕ್ಕೆ ಶುಭ ಹಾರೈಸಿದರು.
ನಿರ್ಗಮಿಸುವ ಅಧ್ಯಕ್ಷೆ ಡಾ. ಜೆಸ್ಸಿ ಮರಿಯಾ ಡಿ ಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಅರ್ಚನಾ ಭಟ್ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ನಿರ್ಗಮನ ಕೋಶಾಧಿಕಾರಿ ಡಾ. ಮಧುಸೂಧನ್, ನೂತನ ಕೋಶಾಧಿಕಾರಿ ಡಾ. ಜೂಲಿಯನ್ ಸಲ್ಡಾನ್ಹ ಮತ್ತು ಮಹಿಳಾ ವೈದ್ಯ ವಿಭಾಗದ ಅಧ್ಯಕ್ಷೆ ಡಾ. ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ಡಾ. ಸುನೀಲ್ ಜತ್ತನ್ನ ಮತ್ತು ಡಾ. ಮಧುರ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.







