ಸುರತ್ಕಲ್| ಬೊಳ್ಳಾಜೆ ಭಟ್ರಕೆರೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ: ಸ್ಥಳೀಯರ ಆರೋಪ

ಸುರತ್ಕಲ್: ಇಲ್ಲಿನ ಕೃಷ್ಣಾಪುರ 7ನೇ ಬ್ಲಾಕ್ ನ 4ನೇ ವಾರ್ಡ್ ಬೊಳ್ಳಾಜೆ ಭಟ್ರಕೆರೆ ಸಂಪೂರ್ಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಸದ್ಯ ಒಳಚಂಡಿ ಕೊಳವೆ ಒಡೆದು ದುರ್ನಾತ ಜೊತೆಗೆ ಮಲಿನ ನೀರು ಬಾವಿಗೆ ಸೇರಿಕೊಂಡು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
4ನೇ ವಾರ್ಡ್ ಬೊಳ್ಳಾಜೆ ಭಟ್ರಕೆರೆ ಪ್ರದೇಶದಲ್ಲಿ ನಿವಾಸಿಗಳು ಸೂಕ್ತ ರಸ್ತೆ, ಚರಂಡಿ ಮತ್ತು ಬೀದಿ ದೀಪದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಹಲವು ಬಾರಿ ಮಹಾನಗರ ಪಾಲಿಕೆ, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಿದ್ದು, ಮನವಿ ಸಲ್ಲಿಸಿದ ಮರುದಿನ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಮತ್ತು ಮನಪಾ ಸದಸ್ಯರು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಹಿಂದಿರುಗುತ್ತಿದ್ದಾರೆ ಹೊರತು ಹಲವು ವರ್ಷಗಳ ನಮ್ಮ ಮೂಲ ಭೂತ ಸೌಕರ್ಯಗಳ ಆಗ್ರಹ ಇನ್ನೂ ಈಡೇರಿಲ್ಲ ಎಂದು ಕಾಲನಿ ನಿವಾಸಿಗಳು ದೂರಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಆಗುವ ಕಡೆಗೆ ಸಾಗುತ್ತಿದ್ದರೆ ಅದೇ ಮಹಾನಗರ ಪಾಲಿಕೆಗೆ ಸೇರಿರುವ 4ನೇ ವಾರ್ಡ್ ಬೊಳ್ಳಾಜೆ ಭಟ್ರಕೆರೆಗೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೆರೆಗಳಂತೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಶಾಲೆ ಕಾಲೇಜುಗಳ ವಾಹನಗಳು ಬರುತ್ತಿಲ್ಲ. ಅಲ್ಲದೆ, ಮಕ್ಕಳು ನದಿಯಂತಿರುವ ರಸ್ತೆ ಯಲ್ಲೇ ಸಾಗಿ ಹೋಗಬೇಕಿದೆ ಎಂದು ಆರೋಪಿಸಿರುವ ನಾಗರೀಕರು, ಸಾಮಾನ್ಯ ನಾಗರೀಕನಿಗೆ ಆಡಳಿತ ನೀಡಿ ಬೇಕಿರುವ ಕನಿಷ್ಠ ಮೂಲಭೂತ ಸೌಕರ್ಯಗಳಿಂದಳೇ ನಾವು ವಂಚಿತರಾಗಿದ್ದೇವೆ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ಕಾಲನಿಯ ಹೆಂಗಸರು ಕತ್ತಲಾಗುತ್ತಲೇ ಹೊರಗೆ ಬರಲು ಹೆದರುತ್ತಿದ್ದಾರೆ ಎಂದು ಕಾಲನಿ ನಿವಾಸಿಗಳು ದೂರಿದ್ದಾರೆ.
ಇಲ್ಲಿ ಕಾನೂನು ಬಾಹಿರವಾಗಿ ರಾಜಕಾಲುವೆಯಲ್ಲೇ ಒಳಚರಂಡಿಯ ಪೈಪ್ ಹಾಕಲಾಗಿದೆ. ಇದು ಇತ್ತೀಚೆಗೆ ಒಡೆದು ಹೋಗಿದೆ. ಅಲ್ಲದೆ, 10 ಅಡಿಗಳಷ್ಟಿದ್ದ ರಾಜ ಕಾಲುವೆಯನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದು, 4 ಅಡಿಗಳಷ್ಟು ನಿರ್ಮಿಸಿ ನಿವೇಶನ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮಳೆ ನೀರಿನ ಜೊತೆ ಒಳಚರಂಡಿಯ ನೀರೂ ಸೇರಿಕೊಂಡು ಸರಾಗವಾಗಿ ಹರಿದು ಹೋಗಲಾಗದೇ ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೆ, ಒಳಚರಂಡಿಯ ನೀರು ಸ್ಥಳೀಯ ಬಾವಿಗಳಿಗೆ ನುಗ್ಗಿದ್ದು, ಕುಡಿಯಲು ಅಥವಾ ಬೇರೆಯಾವುದೇ ಕೆಲಸಕ್ಕೆ ಯೋಗ್ಯವಾಗಿಲ್ಲ. ಬಾವಿಯ ನೀರು ಕುಡಿದಿರುವ ಹಲವು ಮಕ್ಕಳು, ವೃದ್ದರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಕೆಲವರು ಮನೆಗಳನ್ನು ಮುಚ್ಚಿಕೊಂಡು ನೆಂಟರಮನೆಗಳಲ್ಲಿ ವಾಸಿಸುವಂತಾಗಿದೆ ಎಂದು ದೂರಿದ್ದಾರೆ.
4ನೇ ವಾರ್ಡ್ ಬೊಳ್ಳಾಜೆ ಭಟ್ರಕೆರೆ ರಸ್ತೆಗೆ ಡಾಮರೀಕರಣ, ಸಮರ್ಪಕವಾದ ಚರಂಡಿ ವ್ಯವಸ್ಥೆ ಹಾಗೂ ದಾರಿ ದೀಪದ ವ್ಯವಸ್ಥೆಯನ್ನು ಮಾಡಿಕೊಡಬೇಕು ಜೊತೆಗೆ ನಿವಾಸಿಗಳ ನಿದ್ದೆಗೆಡಿಸಿರುವ ಒಡೆದಿರುವ ಒಳಚರಂಡಿ ಪೈಪ್ ಸರಿಪಡಿಸಿ ನೆಮ್ಮದಿಯ ಜೀವನ ನಡೆಸಲು ಮನಪಾ, ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಬೇಕು, ಇಲ್ಲವಾದರೆ ಕಾಲನಿಯ ಎಲ್ಲರೂ ಮನೆಗಳಲ್ಲಿರುವ ಮಕ್ಕಳು ಹಿರಿಯರ ಜೊತೆ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬೊಳ್ಳಾಜೆ ಭಟ್ರಕೆರೆ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನಪಾ, ಶಾಸಕರು ಮತ್ತು ಜನಪ್ರಿನಿಧಿಗಳಿಗೆ ದೂರು ನೀಡುತ್ತಿದ್ದೇವೆ. ಒಬ್ಬರಿಗೆ ಮನವಿ ನೀಡಿದರೆ ಇನ್ನೊಬ್ಬರಿಗೆ ನೀಡಿ ಎಂದು ಜನಪ್ರತಿನಿಧಿಗಳು ಸತಾಯಿಸುತ್ತಾರೆ. ಇಲ್ಲಿ 12ಕ್ಕೂ ಹೆಚ್ಚಿನ ಮನೆಗಳಿವೆ. ಇಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ಸರಿಯದ ರಸ್ತೆಯ ವ್ಯವಸ್ಥೆ ಇಲ್ಲ. ಕಾರ್ಪೊರೇಟರ್ ಗಳಿಗೆ, ಶಾಸಕರಿಗೆ ಹಲವು ಬಾರಿ ಮನವಿ ನೀಡಲಾಗಿದೆ. ಜಿಲ್ಲಾಧಿಕಾರಿಗೂ ಇಮೇಲ್ ಮೂಲಕ ದೂರು ನೀಡಲಾಗಿದೆ ಆದರೂ ಯಾರೂ ನಮ್ಮನ್ನು ನೋಡುತ್ತಿಲ್ಲ. ಸರಕಾಕ್ಕೆ ನಾವು ಪ್ರತೀ ವರ್ಷ ತೆರಿಗೆ ಕಟ್ಟುತ್ತಿದ್ದೇವೆ. ಹಾಗಿರುವಾಗ ನಮಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಮಹಾನಗರಪಾಲಿಕೆಯ ಜವಾಬ್ದಾರಿ. ಆದರೆ, ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಒಂದಾ ಮಹಾನಗರ ಪಾಲಿಕೆ ನಮ್ಮ ಸಹಾಯಕ್ಕೆ ಬರಬೇಕು ಅದಿಲ್ಲದಿದ್ದರೆ, ತೆರಿಗೆ ಕಟ್ಟುವುದು ಬೇಡ, ನಿಮ್ಮ ಸಮಸ್ಯೆಗಳನ್ನು ನೀವೇ ನಿಭಾಯಿಕೊಳ್ಳಿ ಎಂದು ಲಿಖಿತರೂಪದಲ್ಲಿ ನೀಡಲಿ ಆ ಬಳಿಕ ನಮ್ಮ ಜವಾಬ್ದಾರಿಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಭಟ್ರಕೆರೆ ನಿವಾಸಿ ಶ್ರೀಕಾಂತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣಾಪುರ 7ನೇ ಬ್ಲಾಕ್ ನ 4ನೇ ವಾರ್ಡ್ ಬೊಳ್ಳಾಜೆ ಭಟ್ರಕೆರೆ ಪ್ರದೇಶದ ಸಮಸ್ಯೆಗಳ ಬಗ್ಗೆ ʼವಾರ್ತಾಭಾರತಿʼ ಸ್ಥಳೀಯ ಮಾಜಿ ಕಾರ್ಪೊರೇಟರ್ ಲಕ್ಷೀ ಅವರನ್ನು ಸಂಪರ್ಕಿಸಿದಾಗ, " ಈ ಮೊದಲು ದೂರು ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಆಯುಕ್ತೆ ವಾಣಿ ಆಳ್ವ ಅವರು ನಮಗೆ ಸಹಕಾರ ನೀಡುತ್ತಿಲ್ಲ. ಈ ಕಾರಣಕ್ಕಾಗಿ ಭಟ್ರಕೆರೆಯ ಸಮಸ್ಯೆಗಳು ಉಳಿದುಕೊಂಡಿದೆ. ಇದೇ ಸಮಸ್ಯೆಯ ಕುರಿತು ವಲಯ ಆಯುಕ್ತರಿಗೆ ಫೋನ್ ಮಾಡಿದ್ದು, ಅವರು ಕರೆ ಸ್ವೀಕರಿಸುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.







