ಕರ್ನಾಟಕ ಕರಾವಳಿಯಲ್ಲಿ ಕಡಲಾಮೆಗಳು ಅವಸಾನದತ್ತ: ಸಿಎಂಎಫ್‌ಆರ್‌ಐ ಅಧ್ಯಯನ ವರದಿ ಎಚ್ಚರಿಕೆ

ಮಂಗಳೂರು, ಅ. 23: ಕರ್ನಾಟಕದ ಕರಾವಳಿಯಲ್ಲಿ ಕಡಲ ಆಮೆಗಳು ಅವಸಾನದತ್ತ ಸಾಗುತ್ತಿದ್ದು, ಸಂಸತಿ ಶೀಘ್ರವಾಗಿ ನಾಶವಾಗುವ ಸಾಧ್ಯತೆ ಇದೆ ಎಂದು ಎಂದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ)ಯ ಅಧ್ಯಯನ ವರದಿ ಎಚ್ಚರಿಸಿದೆ.
ಕರಾವಳಿ ತೀರದ ಸವಕಳಿ, ಸಮುದ್ರ ಗೋಡೆ ನಿರ್ಮಾಣ ಮತ್ತು ಹವಾಮಾನ ವೈಪರೀತ್ಯದ ಘಟನೆಗಳಿಂದಾಗಿ ಕರ್ನಾಟಕದ ಕರಾವಳಿಯಲ್ಲಿ ಕಡಲಾಮೆಗಳ ಸಂತತಿ ವಿನಾಶದ ಅಂಚಿನತ್ತ ಸಾಗುತ್ತಿದೆ. ಮಾನವ ಹಸ್ತಕ್ಷೇಪ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳು ಸಮುದ್ರದ ಪರಿಸ್ಥಿತಿಗಳು ಆಮೆಯ ಸಂತಾನೋತ್ಪತ್ತಿಯ ತಾಣಗಳ ನಾಶಕ್ಕೆ ಕಾರಣವಾಗಿರುವುದಾಗಿ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಸಮುದ್ರ ಕೊರತೆ ಮತ್ತು ಸಮುದ್ರ ಗೋಡೆಗಳ ನಿರ್ಮಾಣದಿಂದಾಗಿ ಆಮೆಗಳ ಸಂತಾನೋತ್ಪತ್ತಿಯ ತಾಣಗಳು ಕಡಿಮೆಯಾಗಲು ಕಾರಣ ಎಂಬ ಮಾತುಗಳು ಕರಾವಳಿಯ ಶೇ. 52ಕ್ಕೂ ಅಧಿಕ ಮೀನುಗಾರರಿಂದ ವ್ಯಕ್ತವಾಗಿದೆ ಎಂಬುದಾಗಿ ‘ರೀಜನಲ್ ಸ್ಟಡೀಸ್ ಇನ್ ಮೆರೈನ್ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ ಪ್ರಸ್ತಾವಿಸಲಾಗಿದೆ.
ಸಿಎಂಎಫ್‌ಆರ್‌ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಡಾ. ಬಿಂದು ಸುಲೇಚನನ್ ನೇತೃತ್ವದ ಸಂಶೋಧನಾ ತಂಡವು, ಆಮೆಗಳ ಸಂತಾನೋತ್ಪತ್ತಿ ತಾಣಗಳ ಅವಸಾನದ ಕುರಿತಂತೆ ನಡೆಸಿದ ಕ್ಷೇತ್ರ ಭೇಟಿ, ಸಮುದ್ರ ಉತ್ಪಾದನೆಯ ದಶಕದ ವಿಶ್ಲೇಷಣೆ, ಕರಾವಳಿ ಮತ್ತು ಸಮುದ್ರ ನೀರಿನ ಗುಣಮಟ್ಟದ ಮೌಲ್ಯಮಾಪನ, ಹಡಗುಗಳ ಸಂಚಾರ ನಕ್ಷೆ ಮತ್ತು ಸಾಂಪ್ರದಾಯಿಕ ಪರಿಸರ ಒಳನೋಟಗಳಿಂದ ಈ ಅಂಶಗಳು ಬೆಳಕಿಗೆ ಬಂದಿವೆ.
2013 ಮತ್ತು 2023 ರ ನಡುವೆ, ಕರಾವಳಿಯನ್ನು ರಕ್ಷಿಸಲು ರಕ್ಷಣಾತ್ಮಕ ಸಮುದ್ರ ಗೋಡೆಗಳನ್ನು ನಿರ್ಮಿಸಲಾ ಗಿದ್ದರೂ ಕೂಡಾ ಪಣಂಬೂರು, ಎರ್ಮಾಳ್, ಕಿರಿಮಂಜೇಶ್ವರ ಮತ್ತು ಭಟ್ಕಳ ಸೇರಿದಂತೆ ಪ್ರಮುಖ ಸಾಂಪ್ರದಾಯಿಕ ಸ್ಥಳಗಳಲ್ಲಿ ಕಡಲತೀರಗಳ ವ್ಯಾಪ್ತಿಯು ಗಮನಾರ್ಹವಾಗಿ ಕಿರಿದಾಗಿರುವುದನ್ನು ಅಧ್ಯಯನವು ದಾಖಲಿಸಿದೆ.
ಕರಾವಳಿ ಸವೆತವನ್ನು ತಡೆಯಲು ಸಮುದ್ರ ಗೋಡೆಗಳನ್ನು ರಚಿಸಲಾಗಿದೆಯಾದರೂ, ತೀರಗಳ ಸಂರಕ್ಷಣೆಗೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರ್ಯಾಯಗಳನ್ನು ಅನುಸರಿಸಬೇಕು. ಆಮೆಗಳು ಸಂತಾನೋತ್ಪತ್ತಿ ಮಾಡುವ ತೀರಗಳಲ್ಲಿ ಕೃತಕ ಬೆಳಕಿನ ವ್ಯವಸ್ಥೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ಕೃತಕ ಬೆಳಕು ಮರಿಗಳು ಮೊಟ್ಟೆಯಿಂದ ಹೊರಬರುವ ಪ್ರಕ್ರಿಯೆಗೆ ಅಡ್ಡಿಪಡಿಸುವುದಾಗಿ ಸಂಶೋಧಕರು ಅಭಿಪ್ರಾಯಿಸಿದ್ದಾರೆ.
ನದಿಗಳು ಮತ್ತು ಮಳೆ ನೀರಿನ ಚರಂಡಿಗಳ ಮೂಲಕ ಸಮುದ್ರಕ್ಕೆ ಹರಿಯುವ ಕಸದ ತ್ಯಾಜ್ಯವನ್ನು ನಿಯಂತ್ರಿಸಲು ಕರಾವಳಿ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುವಂತೆ ಸಂಶೋಧಕರು ಸಲಹೆ ನೀಡಿದ್ದಾರೆ.
2021ರಿಂದ 2024ರ ನಡುವೆ, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಆಲಿವ್ ರಿಡ್ಲೆ ಸಂಸತಿಯ ಆಮೆಗಳನ್ನು ಮೀನು ಗಾರರು ಗುರುತಿಸಿ ರಕ್ಷಿಸಿರುವುದು ಕಂಡು ಬಂದಿದೆ. ಹಡಗು ಸಂಚಾರ ದಟ್ಟಣೆಯ ವಿಶ್ಲೇಷಣೆಯ ಪ್ರಕಾರ ಅರ್ಧ ಕ್ಕಿಂತಲೂ ಅಧಿಕ ಸಂಖ್ಯೆಯ ಮೀನುಗಾರಿಕಾ ಬೋಟುಗಳು 0.6 ನಾಟಿಕಲ್ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಇದು ಮೀನುಗಾರರಲ್ಲಿ ಮೂಡಿರುವ ಜಾಗೃತಿ ಮತ್ತು ಕಡಲಾಮೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಮೀನುಗಾರರ ಕಾಳಜಿಯನ್ನು ತೋರಿಸುತ್ತದೆ ಎಂದು ಡಾ. ಬಿಂದು ಸುಲೋಚನನ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯ ಅಧ್ಯಯನದ ಸಂದರ್ಭ ಸಮುದ್ರದ ಮೇಲ್ಮೈಯಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಎಲ್‌ನಿನೋ ಘಟನೆಗಳು ಆಮೆಗಳ ಆಹಾರ ಹುಡುಕುವ ಸ್ಥಳಗಳ ಮೇಲೆ ಪ್ರಭಾವ ಬೀರಿರುವುದು ಕಂಡು ಬಂದಿದೆ.
ಸಮುದ್ರ ಕೊರೆತ, ಸಮುದ್ರ ಗೋಡೆಗಳು ಮತ್ತು ಹವಾಮಾನ ಬದಲಾವಣೆಯು ಕಡಲಾಮೆಗಳ ಜತೆಗೆ ಕರಾವಳಿ ಸಮುದಾಯಗಳ ಮೇಲೂ ಸಂಕೀರ್ಣ ಬೆದರಿಕೆಯನ್ನು ಒಡ್ಡುತ್ತಿವೆ. ಇದಕ್ಕಾಗಿ ಸಂರಕ್ಷಣಾ ಕಾರ್ಯತಂತ್ರಗಳ ಜತೆಗೆ, ಆಮೆಗಳ ವಾಸಸ್ಥಳಗಳ ಪುನರ್‌ಸ್ಥಾಪನೆ, ಸಮುದಾಯದ ಭಾಗವಹಿಸುವಿಕೆ ಮತ್ತು ಹೊಂದಾಣಿಕೆಯ ಕರಾವಳಿ ವ್ಯವಸ್ಥೆಯನ್ನು ಸಂಯೋಜಿಸುವ ಅಗತ್ಯವಿದೆ ಎಂಬುದನ್ನು ಡಾ. ಬಿಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.







