ತಾಳ್ಮೆ, ಸಮಯ ಪ್ರಜ್ಞೆ ವಿದ್ಯಾರ್ಥಿ ಜೀವನಕ್ಕೆ ಅಗತ್ಯ : ಡಾ.ಸ್ವಾತಿ ಶೆಟ್ಟಿ

ಮಂಗಳೂರು, ಅ.24: ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಡಾ. ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮಹಾಕವಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಅನಾಟಮಿ ವಿಭಾಗದ ಪ್ರಾಧ್ಯಾಪಕಿ ಡಾ. ಸ್ವಾತಿ ಶೆಟ್ಟಿ ವಾಲ್ಮೀಕಿಯ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು, ವಾಲ್ಮೀಕಿ ಜೀವನದ ತತ್ವ ಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಬೇಕು. ತಾಳ್ಮೆ, ಸಮಯ ಪ್ರಜ್ಞೆ ವಿದ್ಯಾರ್ಥಿ ಜೀವನಕ್ಕೆ ಮುಖ್ಯವಾದದ್ದು. ವೈದ್ಯಕೀಯ ವೃತ್ತಿ ಒಂದು ತಪಸ್ಸಿನಂತೆ ಎಂದರು.
ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರದ್ಧಾ ಶೆಟ್ಟಿ ಅವರು ವಾಲ್ಮೀಕಿ ರಾಮಾಯಣಮ್ ಪ್ರಸ್ತುತಿ ಪಡಿಸಿದರು. ಡಾ.ಕೆ. ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ, ಅನುವಾದ ತಂಡದ ಸದಸ್ಯೆ ವಿಜಯಲಕ್ಷ್ಮಿ ಕಟೀಲು ಕನ್ನಡ ಮತ್ತು ತುಳು ಕಾವ್ಯಗಳಲ್ಲಿ ವಾಲ್ಮೀಕಿಯ ಚಿತ್ರಣ ವಾಚನ ಮತ್ತು ಶ್ರುತಿ ಅಮೀನ್ ಕಾವ್ಯದ ವಿವರಣೆ ನೀಡಿದರು. ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ವರ್ಷಿತಾ ವಾಲ್ಮೀಕಿ ಕುರಿತ ತಮ್ಮ ಮಾಹಿತಿಯನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ಡಾ. ಸಾಯಿಗೀತಾ ಹೆಗ್ಡೆ, ಮಾನವಿಕ ವಿಭಾಗದ ಉಪನ್ಯಾಸಕ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹನ್ಝಲಾ ಸ್ವಾಗತಿಸಿದರು. ವಿದ್ಯಾರ್ಥಿ ಸುಪ್ರೀತ್ ಮತ್ತು ವಾಸುದೇವ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಚಿತ್ ದುಗ್ಗಲ್ ವಂದಿಸಿದರು.







