ಹೋಬಳಿ , ತಾಲೂಕು ಮಟ್ಟದ ಸಮ್ಮೇಳನಕ್ಕೆ ಆದ್ಯತೆ: ಡಾ.ಎಂ. ಪಿ. ಶ್ರೀನಾಥ

ಮಂಗಳೂರು: ಮುಂಬರುವ ದಿನಗಳಲ್ಲಿ ಹೋಬಳಿ ಮತ್ತು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿ ಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಕ.ಸಾ. ಪ .ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ ತಿಳಿಸಿದ್ದಾರೆ.
ಬಂಟ್ವಾಳದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಮಖಂಡಿಯಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಕಾರಿ ಸಮಿತಿಯ ಸಭೆಯ ತೀರ್ಮಾನ ಗಳನ್ನು ತಿಳಿಸಿದ ಅವರು ,ನಮ್ಮ ಜಿಲ್ಲೆಯಲ್ಲಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಇದುವರೆಗೆ 450 ಕ್ಕೂ ಹೆಚ್ಚು ಕನ್ನಡ ಸಾಹಿತ್ಯ ಸಂಬಂಧಿತ ಕಾರ್ಯಕ್ರಮ ಚಟುವಟಿಕೆಗಳು ಸಂಪನ್ನಗೊಂಡಿವೆ. ಶೀಘ್ರದಲ್ಲೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ದತ್ತಿನಿಧಿ ಕಾರ್ಯಕ್ರಮ ನಿರಂತರ ನಡೆಸು ವಂತೆ ಸೂಚನೆ ನೀಡಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಸ್ಥಳದ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.ಈ ಬಗ್ಗೆ ಬಿ.ಎಸ್ ಹಸನಬ್ಬ ಅಮ್ಮೆಂಬಳ ಇವರನ್ನು ಸಂಚಾಲಕರಾಗಿ ನೇಮಿಸಲಾಗಿದೆ. ನವೆಂಬರ್ ಒಂದರಂದು ಕ.ಸಾ.ಪ. ವತಿಯಿಂದ ಮಂಗಳೂರಿನ ಧ. ಮ. ಕಾಲೇಜು ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿದ್ದು, ಗಾಯಕ ಖಾಲಿದ್ ಉಜಿರೆ ಅವರಿಂದ ಕನ್ನಡ ಗೀತಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಸಭೆಗೆ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಸ್ವಾಗತಿಸಿದರು. ಸಭೆಯಲ್ಲಿ ಕ.ಸಾ.ಪ ಕೇಂದ್ರ ಕಾರ್ಯಕಾರಿ ಸಮಿತಿ ಬೆಂಗಳೂರು ಸದಸ್ಯ ಡಾ. ಮಾಧವ.ಎಂ.ಕೆ, ದ.ಕ ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂವಪ್ಪ ನೇರಳಕಟ್ಟೆ ಮತ್ತು ಸನತ್ ಕುಮಾರ್ ಜೈನ್, ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ,ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ, ಉಳ್ಳಾಲ ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ಮೂಡಬಿದ್ರೆ ತಾಲೂಕು ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.







