ಲೇಖಕಿ ಲಲಿತಾ ರೈ, ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ನುಡಿನಮನ

ಮಂಗಳೂರು, ಅ.25: ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿ ಕನ್ನಡದ್ದು ಆಗಿದ್ದರೂ ಕೂಡ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ. ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು ಎಂದು ವಿಶ್ರಾಂತ ಕುಲಪತಿ ಪ್ರೊ. ಬಿ.ಎ.ವಿವೇಕ ರೈ ಹೇಳಿದರು.
ಲೇಖಕಿ ಲಲಿತಾ ರೈ ಮತ್ತು ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಶನಿವಾರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಬ್ಬರು ಸಾಧಕರ ಕೃತಿಗಳು ತುಳು ಅಕಾಡೆಮಿಯಿಂದ ಹೊರಬರಬೇಕು. ಲಲಿತಾ ರೈ ಕನ್ನಡದಲ್ಲಿ ಬರೆದ ಕೃತಿಗಳು ತುಳುವಿಗೆ ಅನುವಾದಗೊಳ್ಳಬೇಕು. ತುಳುವಿನ ಮೇಲಿನ ಪ್ರೀತಿ, ಅಭಿಮಾನ ಹಾಗೂ ತುಳು ಭಾಷೆಯ ಅಭಿವೃದ್ಧಿ ಯಲ್ಲಿ ಯಕ್ಷಗಾನದ ಮೂಲಕ ದಿನೇಶ್ ಅಮ್ಮಣ್ಣಾಯರ ಕೊಡುಗೆ ಅಪಾರವಿದೆ. ಅವರ ತುಳು ಹಾಡುಗಳ ವೈಶಿಷ್ಟ್ಯ ಗಳು ಕೃತಿಯ ರೂಪದಲ್ಲಿ ಹೊರತರುವ ಕೆಲಸವಾಗಬೇಕು ಎಂದು ಬಿ. ಎ ವಿವೇಕ ರೈ ಅಭಿಪ್ರಾಯಪಟ್ಟರು.
ಯಕ್ಷಗಾನ ವಿದ್ವಾಂಸ ಪ್ರೊ. ಪ್ರಭಾಕರ ಜೋಶಿ, ಹಿರಿಯ ಲೇಖಕಿ ಬಿ.ಎಂ.ರೋಹಿಣಿ, ಲೇಖಕಿ ಡಾ. ಜ್ಯೋತಿ ಚೇಳ್ಯಾರು, ಲಲಿತಾ ರೈ ಅವರ ಪುತ್ರ ಡಾ.ಜಿತೇಂದ್ರ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಸುಬ್ರಹ್ಮಣ್ಯ ಬೈಪಾಡಿತ್ತಾಯ ಮಾತನಾಡಿದರು.
ಲಲಿತಾ ರೈ ಕುಟುಂಬಸ್ಥರಾದ ಕೃಪಾ ರೈ, ಆನಂದ ಶೆಟ್ಟಿ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.
ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಡೆಸಿಕೊಟ್ಟರು.







