ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ಮಂಗಳೂರು ಸಜ್ಜು: ಸಿಎಂ ಸಿದ್ದರಾಮಯ್ಯ ಚಾಲನೆ

ಮಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಅ.27ರಿಂದ ಮಂಗಳೂರಿನಲ್ಲಿ ನಡೆಯಲಿದೆ. ಅದಕ್ಕಾಗಿ ದ.ಕ.ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ.
ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ 2ರವರೆಗೆ ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್, ಪುರುಷರ ಡಬಲ್ಸ್, ಮಿಕ್ಸೆಡ್ ಡಬಲ್ಸ್, ವಿಭಾಗಗಳಲ್ಲಿ ಪಂದ್ಯವು ಮೇಲಂತಸ್ತಿನ 4 ಮತ್ತು ನೆಲ ಅಂತಸ್ತಿನ 4 ಸಹಿತ 8 ಅಂಕಣಗಳಲ್ಲಿ ನಡೆಯಲಿದೆ. ಅದಕ್ಕಾಗಿ ಅಂತಿಮ ಹಂತದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ.
ಈಗಾಗಲೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. ಯಾವುದೇ ಲೋಪವಾಗದಂತೆ ಸಕಲ ಸಿದ್ಧತೆಗಳನ್ನು ಮಾಡಲು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.
*12 ದೇಶಗಳ ಕ್ರೀಡಾಪಟುಗಳು ಭಾಗಿ
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾರತ, ಅಮೇರಿಕ, ರಷ್ಯಾ, ಯುಎಇ, ಮಲೇಷ್ಯ, ಕೆನಡ, ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್, ಬಾಂಗ್ಲಾದೇಶ, ಸಿಂಗಾಪುರ, ಇಂಗ್ಲೆಂಡ್ ಹೀಗೆ 12 ದೇಶಗಳ ಸುಮಾರು 450ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಕ್ರೀಡಾಕೂಟಕ್ಕೆ ರಾಜ್ಯ ಸರಕಾರ 1 ಕೋ.ರೂ. ಅನುದಾನ ನೀಡಿದೆ.
ಅ.27 ಉದ್ಘಾಟನೆ ಕಾರ್ಯಕ್ರಮಕ್ಕೆ ಸೀಮಿತಗೊಂಡರೆ ಅ.28ರಿಂದ ನ.2ರವರೆಗೆ ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿಯವರೆಗೆ ಸ್ಪರ್ಧೆ ನಡೆಯಲಿದೆ. ಈ ಕ್ರಿಡಾಕೂಟಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ಉರ್ವ ಮಾರ್ಕೆಟ್ ಕ್ರೀಡಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡಾಂಗಣಕ್ಕೆ ಹೋಗಿ ಬರುವ ಲೇಡಿಹಿಲ್‌ನಿಂದ ಉರ್ವ ಮಾರ್ಕೆಟ್‌ವರೆಗಿನ ರಸ್ತೆಯ ಎಡ-ಬಲಭಾಗವನ್ನು ಅಲಂಕರಿಸಲಾಗಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಬಿಂಬಿಸುವ ಪ್ರದರ್ಶನವಲ್ಲದೆ ಮಾಹಿತಿ ಕೇಂದ್ರ ಸಿದ್ಧಗೊಳಿಸಲಾಗಿದೆ.
*ಮುಖ್ಯಮಂತ್ರಿ ಚಾಲನೆ
ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2025 ಕ್ರೀಡಾಕೂಟಕ್ಕೆ ಅ.27ರಂದು ಸಂಜೆ 4:25ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ, ಭಾರತ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ್ ಬಿಸ್ವಾ ಶರ್ಮಾ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್, ಶಾಸಕ ವೇದವ್ಯಾಸ್ ಕಾಮತ್ ಮತ್ತಿತರರು ಭಾಗವಹಿಸಲಿದ್ದಾರೆ.
"ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯ ನಡೆಯಲಿದೆ. ಬಹುತೇಕ ಸಿದ್ದತೆ ಪೂರ್ಣಗೊಂಡಿವೆ. 12 ದೇಶಗಳ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ".
-ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್







