ಸಂತ ಮದರ್ ತೆರೆಸಾ ವಿಚಾರ ವೇದಿಕೆಯಿಂದ ದೀಪಾವಳಿ ಆಚರಣೆ

ಮಂಗಳೂರು, ಅ.27: ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ ಶನಿವಾರ ಬೆಳಕಿನ ಹಬ್ಬ ದೀಪಾವಳಿಯನ್ನು ಸಂತ ಅಲೋಸಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಸಹೋದಯ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಫಾ. ಜೆ. ಬಿ. ಸಲ್ದಾನ್ಹಾ ಅವರು, ‘‘ದೀಪಾವಳಿ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಇದು ಧರ್ಮವನ್ನು ಮೀರಿಸಿ ಎಲ್ಲರನ್ನು ಒಗ್ಗೂಡಿಸುವ ಹಬ್ಬ’’ ಎಂದು ಹೇಳಿದರು
ಅತಿಥಿಗಳಾಗಿ ಯೇನಪೋಯ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಡಾ. ಜೀವನ ರಾಜ್ ಕುಟ್ಟರ್, ನಿವೃತ್ತ ಸಾಮಾಜಿಕ ಕಲ್ಯಾಣಾಧಿಕಾರಿ ಯೂಸುಫ್ ಅಖ್ತರ್, ಮತ್ತು ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರೆಸ್ , ಸ್ಟೇನಿ ಲೋಬೊ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ಟಾ, ಅನಿವನ್ ಡಿ ಸೋಜ ಹಾಗೂ ಯೂಸುಫ್ ಅಖ್ತರ್ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಿಶಾಲ್ ಮೆಲ್ಬಾ ಕ್ರಾಸ್ಟಾ ಮತ್ತು ರೋನಿ ಕ್ರಾಸ್ಟಾ ಗಾಯನವನ್ನು ಪ್ರಸ್ತುತಪಡಿಸಿದರು. ಅನಿವನ್ ಡಿ ಸೋಜ ಅದ್ಭುತ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು, ಮಂಜುಳಾ ನಾಯಕ್ ವಂದಿಸಿದರು. ಮನೋಜ್ ಕುಮಾರ್ ಮತ್ತು ಡಾಲ್ಫಿ ಡಿ ಸೋಜ ಕಾರ್ಯಕ್ರಮ ನಿರ್ವಹಿಸಿದರು.







