ತಂತ್ರಜ್ಞಾನದ ಜೊತೆ ನಿಂತು ಕನ್ನಡವನ್ನು ಉಳಿಸೋಣ: ಪ್ರೊ. ಕೃಷ್ಣಮೂರ್ತಿ

ಕೊಣಾಜೆ : 'ಕನ್ನಡ ಭಾಷಾ ಅಧ್ಯಯನವು ಹಲವರಿಗೆ ಹೊಸ ಹೊಸ ಅವಕಾಶಗಳನ್ನು ಒದಗಿಸಿಕೊಟ್ಟಿದೆ, ನಾವು ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆ ನಿಂತು ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡಬೇಕು' ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಅವರು ಹೇಳಿದರು.
ಅವರು ಮಂಗಳೂರು ವಿ.ವಿ ಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೋ. ಬಿ.ಎ.ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆದ ಬಿತ್ತಿ ಗೋಡೆ ಬರಹ ಪತ್ರಿಕೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಂದು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ನಿಂತಿರುವ ಅನೇಕ ಸಾಹಿತಿಗಳು ತಮ್ಮ ಆರಂಭದ ದಿನಗಳಲ್ಲಿ, ತಮ್ಮ ಶಾಲಾ - ಕಾಲೇಜುಗಳ ದಿನಮಾನಗಳಲ್ಲಿದ್ದಂತಹ ಸಂದರ್ಭದಲ್ಲಿ ಬಿತ್ತಿ ಗೋಡೆ ಬರಹದಂತ ಅನೇಕ ಬರವಣಿಗೆಯ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು ಅವುಗಳಲ್ಲಿ ಸಣ್ಣ - ಪುಟ್ಟ ಕವನ, ಲೇಖನಗಳಂತಹ ಇತ್ಯಾದಿಗಳನ್ನು ಬರೆದು ಪ್ರಕಟಿಸಿ, ಅವುಗಳ ನಿರಂತರ ಅಭ್ಯಾಸದಿಂದಲೇ ಇಂದು ದೊಡ್ಡ ದೊಡ್ಡ ಶ್ರೇಷ್ಠ ಸಾಹಿತಿಗಳಾಗಲು ಕಾರಣವಾಗಿದೆ ಎಂದು ಅವರು ಹೇಳಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ನಾಗಪ್ಪ ಗೌಡ ಆರ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಧನಂಜಯ ಕುಂಬ್ಳೆ, ಡಾ. ಯಶುಕುಮಾರ್ ಡಿ., ಬಿತ್ತಿ ಸಂಪಾದಕಿಯಾದ ಪ್ರಥ್ವಿ ಮತ್ತು ಉಪಸಂಪಾದಕರಾದ ಜಗದೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿನಿಯಾದ ಪವಿತ್ರ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸಲೀಂ, ಮರಿಸಿದ್ದಪ್ಪ ಮತ್ತು ಶ್ರೇಯಸ್ ಕವನ ವಾಚನ ಮಾಡಿದರು. ಅಭಿಷೇಕ ವಾಲ್ಮೀಕಿ ಸ್ವಾಗತಿಸಿದರು, ಅನೂಪ್ ವಂದಿಸಿದರು, ರೇಷ್ಮಾ ಎನ್. ಬಾರಿಗ ಕಾರ್ಯಕ್ರಮವನ್ನು ನಿರೂಪಿಸಿದರು.







